

ಬಾಗಲಕೋಟೆ: ಯಾವುದೇ ಆಸೆ, ಆಕಾಂಕ್ಷೆ, ಸ್ಥಾನ ಇಲ್ಲದೆ ಕಳೆದ ೩೦ ವರ್ಷದಿಂದ ಬಿಜೆಪಿಯಲ್ಲಿ ಶ್ರಮಿಸಿದ್ದೆ. ನಿಷ್ಠಾವಂತರಿಗೆ ಬಿಜೆಪಿಯಲ್ಲಿ ಕನಿಷ್ಠ ಗೌರವ ಸಿಗುತ್ತಿಲ್ಲ. ಸದ್ಯ ಪಕ್ಷದಲ್ಲಿ ಮೂಲ ಬಿಜೆಪಿಗರು ಉಳಿದಿಲ್ಲ. ತತ್ವ ಸಿದ್ಧಾಂತಾ ಇಲ್ಲವಾಗಿ ಹೋಗಿದೆ. ಹೀಗಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ, ವಿಧಾನಪರಿಷತ್ ಹಾಗೂ ಲೋಕಸಭೆ, ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ. ಕಳೆದ ೨೦೧೪ರ ಲೋಕಸಭೆ ಚುನಾವಣೆಯಲ್ಲಿ ಇಡೀ ಕ್ಷೇತ್ರದಾದ್ಯಂತ ಗದ್ದಿಗೌಡರ ಪರವಾಗಿ ಕೆಲಸ ಮಾಡಿದ್ದೆ. ಆದರೇ ನಮ್ಮನ್ನು ಬಿಜೆಪಿಯಿಂದ ಯಾಕೆ ಉಚ್ಛಾಟನೆ ಮಾಡಿದರು ಎಂಬುದೇ ಈ ವರೆಗೆ ಗೊತ್ತಾಗಿಲ್ಲ ಎಂದರು.
ರಾಜ್ಯದಲ್ಲಿ ಪಕ್ಷ ಕಟ್ಟಿದ ಈಶ್ವರಪ್ಪ ಯಾರು ಎಂದೇ ಗೊತ್ತಿಲ್ಲ ಅಂತ ಈಚೆಗೆ ಜಿಲ್ಲೆಗೆ ಬಂದಿದ್ದ ಹಿರಿಯರೊಬ್ಬರು ಹೇಳಿದರು. ಹಿರಿಯ ನಾಯಕರ ಪರಿಸ್ಥಿತಿ ಹೀಗಾದರೆ ಉಳಿದವರ ಪರಿಸ್ಥಿತಿ ಹೇಗೆ ಅಂತ ಪ್ರಶ್ನಿಸಿದರು, ಪಕ್ಷದಿಂದ ಉಚ್ಛಾಟನೆ ಮಾಡಿದ ಬಳಿಕ ಕಳೆದ ವಿಧಾನಸಭೆ ಚುನಾವಣೆ ವೇಳೆ ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೆ. ಯಾರನ್ನು ಸೋಲಿಸಲು ಅಲ್ಲ. ಗೆಲ್ಲಿಸಲು ಅಲ್ಲ. ನಾನು ಗೆಲ್ಲಬೇಕು ಎನ್ನುವ ಕಾರಣಕ್ಕೆ ಸ್ಪರ್ಧೆ ಮಾಡಿದ್ದೆ. ಕ್ಷೇತ್ರದ ಹಲವು ಜನರು, ಪ್ರಜಾಪ್ರಭುಗಳು ನನಗೆ ಬೆಂಬಲಿಸಿದ್ದರು. ಹಿಂದೂ ಪರಿವಾರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೂ ನಮ್ಮೊಂದಿಗೆ ಇದ್ದರು. ಸಧ್ಯ ಅವರೆಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಮುಂದುವರೆಯವ ಭರವಸೆ ಇದೆ ಎಂದರು.
ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ, ಯುವ ಹುಮ್ಮಸ್ಸಿನಿಂದ ಜಿಲ್ಲೆಗೆ ಏನಾದರೂ ಮಾಡಬೇಕೆಂಬ ಹೊಸ ಕನಸುಗಳೊಂದಿಗೆ ಸ್ಪರ್ಧೆ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ನನಗೆ ಬೆಂಬಲಿಸಿದ ಪ್ರತಿಯೊಬ್ಬರೂ, ಕಾಂಗ್ರೆಸ್ ಗೆಲ್ಲಿಸಿ ಎಂದು ಕೈ ಮುಗಿದು ಕೇಳಿಕೊಳ್ಳುವೆ ಎಂದು ತಿಳಿಸಿದರು.
ಮುಖಂಡರಾದ ಬಸವರಾಜ ಪಾತ್ರೋಟಿ, ಗುರು ಅನಗವಾಡಿ, ಶರಣು ಕೋರಿ, ಪ್ರಶಾಂತ ಸನಕನಾಳ, ಯಮನಪ್ಪ ಕಂದಗಲ್ ಮುಂತಾದವರು ಉಪಸ್ಥಿತರಿದ್ದರು.