

ರಾವಂದೂರು: ಅರ್ಹ ನಿರ್ಗತಿಕ ಫಲಾನುಭವಿಗಳಿಗೆ ನಿವೇಶನ ಕೊಡಿಸಲಾಗುವುದು. ಇದಕ್ಕೆ ಯಾರು ಕೂಡ ಮಧ್ಯಸ್ಥಿಕೆ ಮಾಡಬೇಡಿ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ಬೆಟ್ಟದ ತುಂಗಾ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ವಾಸ್ತವ ಸ್ಥಿತಿಗಳನ್ನು ಅರಿತು ನಿವೇಶನ ರಹಿತರನ್ನು ಆಯ್ಕೆ ಮಾಡುತ್ತೇನೆ. ಇದರಲ್ಲಿ ಯಾರು ಕೂಡ ಮಧ್ಯಸ್ಥಿಕೆ ಮಾಡಬೇಡಿ. ಇದರಿಂದಾಗಿ ಘರ್ಷಣೆಯಾಗುತ್ತದೆ. ಈಗಾಗಲೇ ಕಳೆದ ಸಾಲಿನಲ್ಲಿ ನಿವೇಶನ ರಹಿತರ ಆಯ್ಕೆ ಪಟ್ಟಿಯನ್ನು ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಇದರಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಿ ನಿವೇಶನ ಹಂಚಿಕೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಪಂ ಮಾಜಿ ಸದಸ್ಯ ರಾಜು ಮಾತನಾಡಿ, ಗ್ರಾಪಂ ಅಧಿಕಾರಿಗಳು ಗ್ರಾಮಸ್ಥರ ಗಮನಕ್ಕೆ ತಾರದೆ ನಿವೇಶನ ಹಂಚಲು ಆಯ್ಕೆಪಟ್ಟಿ ಮಾಡಿದ್ದಾರೆ. ಇದರಿಂದಾಗಿ ಅರ್ಹ ವ್ಯಕ್ತಿಗಳಿಗೆ ಅನ್ಯಾಯವಾಗುತ್ತಿದೆ. ಈ ಪಟ್ಟಿಯನ್ನು ಸಾರ್ವಜನಿಕರ ಮುಂದೆ ತಿಳಿಸುವಂತೆ ಒತ್ತಾಯಿಸಿದರು. ಸಾರ್ವಜನಿಕ ಆಸ್ಪತ್ರೆಗೆ ಮತ್ತು ಪಶು ಆಸ್ಪತ್ರೆಗೆ ವೈದ್ಯರಿಲ್ಲ. ಗ್ರಾಮದ ಸಮೀಪದಲ್ಲೇ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಹಾದು ಹೋಗುವ ರಸ್ತೆ ಇದ್ದು ಅದನ್ನು ದುರಸ್ತಿ ಮಾಡಿಕೊಡಬೇಕಾಗಿ ಸಚಿವರಿಗೆ ಮನವಿ ಮಾಡಿದರು.
ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ಪ್ರೀತಿ ಅರಸ್, ಮೈಮುಲ್ ನಿರ್ದೇಶಕ ಪ್ರಕಾಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಲೋಕೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ತಹಸೀಲ್ದಾರ್ ನಿಸರ್ಗಪ್ರಿಯ, ತಾಪಂ ಕಾರ್ಯನಿರ್ವಹಕಾಧಿಕಾರಿ ಸುನೀಲ್ ಕುಮಾರ್, ಇಂಜಿನಿಯರ್ ವೆಂಕಟೇಶ್, ಕೃಷ್ಣಮೂರ್ತಿ, ಮಲ್ಲಿಕಾರ್ಜುನ, ಅಹಮ್ಮದ್, ಲೋಹಿತ್, ಮುನಿಯಪ್ಪ, ಮುಖಂಡರಾದ ಅರವಿಂದ್‌ರಾಜೇ ಅರಸ್, ರಾಜು, ಪ್ರಕಾಶ್‌ರಾಜೇ ಅರಸ್, ವಿಜಯ ದೇವರಾಜ ಅರಸ್, ಚಿಕ್ಕೇಗೌಡ, ಸಣ್ಣಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಸಿ.ಪ್ರಶಾಂತ್ ಹಾಜರಿದ್ದರು.