ನಿವೃತ್ತಿ ನಂತರವೂ ಮಕ್ಕಳಿಗೆ ಮಾರ್ಗದರ್ಶನ ನೀಡಿ

15blrp1
Published on

ಬೇಲೂರು: ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ನಿವೃತ್ತಿ ನಂತರವೂ ಶಿಕ್ಷಕರು ಮಕ್ಕಳಿಗೆ ಜ್ಞಾನ ಹಂಚುವ ಕೆಲಸ ನಿರಂತರವಾಗಿ ಮಾಡಬೇಕು ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಉದಯ್‌ಕುಮಾರ್ ಹೇಳಿದರು.

ಪಟ್ಟಣದ ವಿದ್ಯಾ ವಿಕಾಸ ಶಾಲೆಯಲ್ಲಿ ರೋಟರಿ ಕ್ಲಬ್‌ನಿಂದ ಮಂಗಳವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಅವರ ಆಸಕ್ತಿಗೆ ತಕ್ಕಂತೆ ತಿದ್ದಿ, ಉತ್ತಮ ಶಿಕ್ಷಣ, ಶಿಸ್ತು ನೀಡುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು. ಶಿಕ್ಷಕ ವೃತ್ತಿ ಬಹಳ ಮಹತ್ವವಾದದ್ದು. ಸರ್ಕಾರಿ ಸೇವೆಯಲ್ಲಿ 35 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವುದು ಸುಲಭದ ವಿಷಯವಲ್ಲ. ನಮ್ಮ ಸಾಧನೆ ಹೆಚ್ಚಿದೆ. ನಾವು ನಿವೃತ್ತಿಯಾದರೂ ನಮ್ಮ ಸುತ್ತಮುತ್ತಲ ಮಕ್ಕಳು ಉತ್ತಮ ವ್ಯಾಸಂಗ ಮಾಡುವಂತೆ ಪ್ರೇರೇಪಿಸಬೇಕು. ಮುಂದೆಯೂ ಮಕ್ಕಳಿಗೆ ಮಾರ್ಗದರ್ಶನ ಮಾಡುವುದನ್ನು ಮುಂದುವರಿಸುವ ಮೂಲಕ ನಿವೃತ್ತ ಜೀವನವನ್ನು ಆರೋಗ್ಯಕರವಾಗಿ ಕಳೆಯಬೇಕು ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಬಿ.ಎ.ರಂಗನಾಥ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಸಂಸ್ಥೆಯಿಂದ ನಿವೃತ್ತರಾದ 35ಕ್ಕೂ ಹೆಚ್ಚು ಶಿಕ್ಷಕರನ್ನು ಗೌರವಿಸುತ್ತಿದ್ದೇವೆ. ಶಿಕ್ಷಕರು ತಮ್ಮ ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದಲೇ ಶಿಷ್ಯರ ಮನಸ್ಸಿನಲ್ಲಿ ಸದಾ ನಿಲ್ಲುತ್ತಾರೆ. ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಶಿಕ್ಷಕರಿಂದಲೇ ಮಾತ್ರ ಸಾಧ್ಯ ಎಂದು ಹೇಳಿದರು.

ರೋಟರಿ ಕ್ಲಬ್ ಕಾರ್ಯದರ್ಶಿ ಎಚ್.ಕೆ.ರಮೇಶ್, ಮಾಜಿ ಅಧ್ಯಕ್ಷ ಶಂಬುಗೌಡ, ಹಿರಿಯ ಸದಸ್ಯರಾದ ಬಿ.ಎಲ್.ರಾಜೇಗೌಡ, ಮೂಗಪ್ಪಗೌಡ, ವಿನೋದ್‌ಚೌಡ, ಸದಸ್ಯರಾದ ಗಣೇಶ್, ಸಂದೇಶ್, ಪುಟ್ಟ, ಯೋಗೇಶ್ ಗೌಡ, ಬಿ.ಬಿ.ಶಿವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net