

ಯಳಂದೂರು: ರಾಜ್ಯ ನಿವೃತ್ತ ನೌಕರರ ವೇದಿಕೆಯಿಂದ ಜ.30ರಂದು ನಿವೃತ್ತರಾದವರಿಗೆ 7ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿಸಿಆರ್‌ಜಿ ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದ ಜ.30ರಂದು ರಾಜ್ಯಾದ್ಯಂತ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ನಿವೃತ್ತ ನೌಕರರ ವೇದಿಕೆ ಜಿಲ್ಲಾ ಸಂಚಾಲಕ ರುದ್ರಯ್ಯ ತಿಳಿಸಿದ್ದಾರೆ.
ಅವರು ಮಂಗಳವಾರ ಪಟ್ಟಣದ ದೇವಾಂಗ ಬಡಾವಣೆಯ ಸರ್ಕಾರಿ ನೌಕರರ ಸಂಘದ ಸಂಭಾಗಣದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜ.30ರ ಮಹಾತ್ಮ ಗಾಂಧೀಜಿ ಹುತಾತ್ಮರಾದ ಪುಣ್ಯ ಸ್ಮರಣೆ ದಿನದ ನಿಮಿತ್ತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 2022ರ ಜುಲೈನಿಂದ 2024ರ ಜುಲೈ ಅವಧಿಯಲ್ಲಿ ನಿವೃತ್ತಿಯಾದ ನೌಕರರಿಗೆ 6ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿಸಿಆರ್‌ಜಿ ಕಮ್ಯುಟೇಶನ್, ಗಳಿಗೆ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ಸುಮಾರು 12ರಿಂದ 22 ಲಕ್ಷ ರೂ.ಗಳಷ್ಟು ಆರ್ಥಿಕ ನಷ್ಟವಾಗಿ ಅನ್ಯಾಯವಾಗಿದೆ. ಇದರಿಂದ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಸಾಕಷ್ಟ ಬಾರಿ ಮನವಿ ಪತ್ರವನ್ನು ಸಲ್ಲಿಸಿಲಾಗಿದೆ. ಜತೆಗೆ ಬೆಂಗಳೂರು, ಬೆಳಗಾವಿ ಅಧಿವೇಶನದ ಸಂದರ್ಭದಲ್ಲೂ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದ್ದರಿಂದ ರಾಜ್ಯಾದ್ಯಂತ ಏಕ ಕಾಲದಲ್ಲಿ ತಾಲೂಕು ಕೇಂದ್ರಗಳಲ್ಲಿ ಕಚೇರಿ ಮುಂಭಾಗ ಜ.30ರಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನಿವೃತ್ತ ನೌಕರರ ವೇದಿಕೆ ಜಿಲ್ಲಾ ಸಂಚಾಲಕಿ ವೈ.ನಾಗರತ್ನ ತಾಲೂಕು ಸಂಚಾಲಕರಾದ ವೈ.ಆರ್.ರಂಗಸ್ವಾಮಿ, ಎಸ್.ಭಾಗ್ಯ, ನಿರ್ದೇಶಕ ಎನ್.ರಾಜು ಮತ್ತಿತರರು ಹಾಜರಿದ್ದರು.