

ಗುಂಡ್ಲುಪೇಟೆ: 7ನೇ ವೇತನ ಆಯೋಗದ ಅನುಸಾರ ಸವಲತ್ತುಗಳನ್ನು ನೀಡುವಂತೆ ಒತ್ತಾಯಿಸಿ ನಿವೃತ್ತ ನೌಕರರ ವೇದಿಕೆ ಸದಸ್ಯರು ಗುರುವಾರ ಧರಣಿ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು
ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್.ಶಿವಸ್ವಾಮಿ ನೇತೃತ್ವದಲ್ಲಿ ಪಟ್ಟಣದ ತಾಲೂಕು ಕಚೇರಿ ಎದುರು ಸಮಾವೇಶಗೊಂಡ ಸದಸ್ಯರು ಧರಣಿ ನಡೆಸಿದರು. 2022ರ ಜುಲೈನಿಂದ 2024ರ ಜುಲೈ ಅವಧಿಯಲ್ಲಿ ನಿವೃತ್ತಿಯಾದ ನೌಕರರಿಗೆ 6ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ಸುಮಾರು 12ರಿಂದ 22 ಲಕ್ಷ ರೂ.ಗಳಷ್ಟು ಆರ್ಥಿಕ ನಷ್ಟವಾಗಿ ಅನ್ಯಾಯವಾಗಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರಿಗೂ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಜತೆಗೆ ಬೆಂಗಳೂರು, ಬೆಳಗಾವಿ ಅಧಿವೇಶನದ ಸಂದರ್ಭದಲ್ಲೂ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಾದರೂ 7ನೇ ವೇತನ ಆಯೋಗದ ಅನುಸಾರ ಡಿಸಿಆರ್‌ಜಿ ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದ ಮನವಿಪತ್ರವನ್ನು ತಹಸೀಲ್ದಾರ್ ಟಿ.ರಮೇಶ್ ಬಾಬು ಅವರಿಗೆ ಸಲ್ಲಿಸಿದರು.
ಸದಸ್ಯರಾದ ಕೆ.ಎಸ್.ರಾಜಶೇಖರಪ್ಪ, ಕೆ.ಸಿ.ಕೆಂಪರಾಜು, ಅಂಕಪ್ಪ, ಯು.ಎಂ.ಸಿದ್ದರಾಜು, ಮಲ್ಲು, ನಾಗರಾಜಪ್ಪ, ಶಿವಬಸವಮೂರ್ತಿ, ಕೃಷ್ಣೇಗೌಡ ಹಾಗೂ ಇತರರಿದ್ದರು.