

ಶಿರಸಿ: ಅತಿಕ್ರಮಣದಾರರೊಬ್ಬರ ಜಿಪಿಎಸ್ ಆದ ಜಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯನ್ನು ಅರಣ್ಯಾಧಿಕಾರಿಗಳು ಧ್ವಂಸಗೊಳಿಸಿದ ಘಟನೆ ಸೋಮವಾರ ತಾಲೂಕಿನ ಅಂದಳ್ಳಿಯಲ್ಲಿ ನಡೆದಿದೆ. ತಾಲೂಕಿನ ಸದಾಶಿವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಳ್ಳಿಯ ಕಾಮಾಕ್ಷಿ ನಾಯ್ಕ ಎಂಬುವವರ ಮನೆಯನ್ನು ಶಿರಸಿ ಅರಣ್ಯ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೆಸಿಬಿಯಿಂದ ಸಂಪೂರ್ಣ ಧ್ವಂಸಗೊಳಿಸಿದ್ದಾರೆ. ಜತೆಗೆ ತೆರವುಗೊಳಿಸಿದ ಜಾಗದಲ್ಲಿ ಸಸಿ ನೆಟ್ಟಿದ್ದಾರೆ.
1957ಕ್ಕೂ ಪೂರ್ವದಲ್ಲಿನ ಅತಿಕ್ರಮಣ ಜಾಗ ಇದಾಗಿದ್ದು, ಕಳೆದ 10 ವರ್ಷದಿಂದ ಹಂತಹಂತವಾಗಿ ಮನೆ ನಿರ್ಮಾಣ ಮಾಡಲಾಗುತ್ತಿತ್ತು. ಈವರೆಗೆ 10 ಲಕ್ಷಕ್ಕೂ ಅಧಿಕ ಹಣ ವ್ಯಯಿಸಿ ಸ್ಲಾ್ಯಬ್ ಹಂತಕ್ಕೆ ಬಂದ ಮನೆಯನ್ನು ಕೆಡವಿ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ನೊಂದು ನುಡಿದರು. ಇಲ್ಲಿ 4.17 ಎಕರೆ ಜಾಗದ ಜಿಪಿಎಸ್ ಆಗಿತ್ತು. ಅರಣ್ಯ ಇಲಾಖೆಯವರು ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳಿ ಎಂದು ಹೇಳಬಹುದಿತ್ತು. ಆದರೆ, ಏಕಾಏಕಿ ಕೆಡವಿ ದೌರ್ಜನ್ಯ ನಡೆಸಿದ್ದಾರೆ. ಸಾಲ ಮಾಡಿ ನಿರ್ವಿುಸಿದ್ದ ಲಕ್ಷಾಂತರ ರೂ. ನಷ್ಟವಾಗಿದೆ. ಆಗಿರುವ ನಷ್ಟ ಭರಿಸುವವರಾರು? ಎಂದು ಅಸಹಾಯಕವಾಗಿ ನುಡಿದರು.