

ಯಲ್ಲಾಪುರ/ಮುಂಡಗೋಡ: ನಾನು ಮತ್ತೊಮ್ಮೆ ಆಯ್ಕೆಯಾದಲ್ಲಿ ಪದವೀಧರ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆಯನ್ನು ಪುನಃ ಆರಂಭಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಹೇಳಿದರು.
ಯಲ್ಲಾಪುರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಿರುದ್ಯೋಗಿ ಪದವೀಧರರ ಸಮಸ್ಯೆ ಬಗೆಹರಿಸಲು ಸದನದ ಒಳಗೆ ಮತ್ತು ಹೊರಗೆ ಪ್ರಯತ್ನಿಸಿದ್ದೇನೆ. ಕ್ಷೇತ್ರದಲ್ಲಿ ವಿವಿಧೆಡೆ ಉದ್ಯೋಗ ಮೇಳ ಆಯೋಜಿಸಿ, ಅವರಿಗೆ ಉದ್ಯೋಗ ಕೊಡಿಸುವಲ್ಲೂ ಶ್ರಮಿಸಿದ್ದೇನೆ. ಕ್ಷೇತ್ರದಲ್ಲಿನ ಶಿಕ್ಷಕರು ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳ ಸಮಸ್ಯೆ ಕುರಿತು ಸದನದ ಗಮನ ಸೆಳೆದಿದ್ದೇನೆ. ಹಿಂದಿನ ಅವಧಿಯ ಸತ್ಕಾರ್ಯಗಳು ಗೆಲುವಿಗೆ ಸಹಕರಿಯಾಗಲಿವೆ ಎಂದರು.
ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಈಗಾಗಲೇ ಕ್ಷೇತ್ರದಲ್ಲಿ ಮನೆ-ಮನೆ ಭೇಟಿ ನೀಡಿ, ಮತದಾರರಿಗೆ ಅಭ್ಯರ್ಥಿ ಪರ ಮತಯಾಚಿಸುವ ಕಾರ್ಯ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತದಾರರು ಒಲವು ವ್ಯಕ್ತಪಡಿಸುತ್ತಿದ್ದಾರೆ. ಇಡೀ ಕ್ಷೇತ್ರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಸಂಕನೂರ 25,000ಕ್ಕೂ ಅಧಿಕ ಮತದಿಂದ ಗೆಲ್ಲುವ ವಿಶ್ವಾಸವಿದೆ. ಆಡಳಿತ ಪಕ್ಷದ ಸಂಕನೂರ ಆಯ್ಕೆಯಾದರೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಎಂಎಲ್ಸಿ ಶಾಂತಾರಾಮ ಸಿದ್ದಿ, ಬಿಜೆಪಿ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ, ಪ್ರಧಾನ ಕಾರ್ಯದರ್ಶಿಗಳಾದ ಡಾ. ರವಿ ಭಟ್ಟ ಬರಗದ್ದೆ, ಪ್ರಸಾದ ಹೆಗಡೆ ಇತರರಿದ್ದರು.
ಮುಂಡಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಜೂನಿಯರ್ ಕಾಲೇಜ್, ಮುರಾರ್ಜಿ ವಸತಿ ಶಾಲೆ, ಕಂಬಾರಗಟ್ಟಿ ಬಡಾವಣೆಯಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪದವೀಧರ ಶಿಕ್ಷಕರ ಮತಯಾಚಿಸಿದರು.
ಈ ವೇಳೆ ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಮಾತನಾಡಿ, ಎಸ್.ವಿ. ಸಂಕನೂರ ಅವರು ಈ ಹಿಂದೆ ವಿರೋಧ ಪಕ್ಷ ಅಧಿಕಾರದಲ್ಲಿದ್ದಾಗ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದಾರೆ. ಈ ಬಾರಿ ನಮ್ಮದೆ ಸರ್ಕಾರವಿದ್ದು, ಅವರಿಗೆ ಮತ್ತೊಂದು ಅವಕಾಶ ನೀಡಿದರೆ ಪದವೀಧರರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿ.ಪಂ. ಸದಸ್ಯ ಎಲ್.ಟಿ. ಪಾಟೀಲ ಮಾತನಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಮಹೇಶ ಹೊಸಕೊಪ್ಪ, ಪ್ರಕಾಶ ಅಂಕಲಕೋಟಿ, ಗುಡ್ಡಪ್ಪ ಕಾತೂರ, ನಾಗರಾಜ ಕುನ್ನೂರ, ರವಿ ಹಾವೇರಿ, ಗುರುರಾಜ ಕಾಮತ, ರಾಜು ಗುಬ್ಬಕ್ಕನವರ, ಬಸವರಾಜ ಠನಕೆದಾರ ಇತರರಿದ್ದರು.