ನಂಜನಗೂಡು: ನಿರಂತರ ಪರಿಶ್ರಮದಿಂದ ಮನುಷ್ಯ ಉನ್ನತ ಗುರಿ ಸಾಧಿಸಬಹುದು ಎಂದು ನಿವೃತ್ತ ಕಂದಾಯ ಇಲಾಖೆ ಅಧಿಕಾರಿ ದೇವನೂರು ಗುರು ಬಸಪ್ಪ ಹೇಳಿದರು.
ವಿದ್ಯಾ ನಗರದ ಸಮೃದ್ಧಿ ಗೆಳೆಯರ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಮನುಷ್ಯ ಒತ್ತಡದ ಜೀವನ ನಡೆಸುತ್ತಿದ್ದಾನೆ. ಎಲ್ಲವೂ ಇದ್ದರೂ ಇನ್ನಷ್ಟು ಬೇಕು ಎಂದು ಹಾತೊರೆಯುತ್ತಿದ್ದು ಬದುಕಿನ ನೆಮ್ಮದಿ, ಸಂತೋಷ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವುದು ಅತ್ಯಂತ ಶೋಚನೀಯ. ವೃತ್ತಿಯಲ್ಲಿ ಎದುರಾಗುವ ಯಾವುದೇ ಸವಾಲುಗಳನ್ನು ಸಮಸ್ಯೆ ಎಂದು ಭಾವಿಸದೆ ನಿಮ್ಮ ಆಂತರಿಕ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಲು ಸಿಕ್ಕ ಅವಕಾಶ ಎಂದು ಭಾವಿಸಿದಾಗ ಯಶಸ್ಸು ನಿಮ್ಮದಾಗುತ್ತದೆ ಎಂದರು.
ಸಮೃದ್ಧಿ ಗೆಳೆಯರ ಬಳಗಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಕಲ್ಮಳ್ಳಿ ನಟರಾಜು ಮಾತನಾಡಿ, ವಿದ್ಯೆ ಎನ್ನುವುದು ಸಾಧಕರ ಸ್ವತ್ತೆ ವಿನಃ ಸೋಮಾರಿಗಳ ಸ್ವತ್ತಲ್ಲ ಎನ್ನುವ ಲೋಕೋಕ್ತಿಯನ್ನು ಈ ಕಾರ್ಯಕ್ರಮದಲ್ಲಿ ಅಭಿನಂದನೆಗೆ ಅರ್ಹರಾದವರು ಸಾಕ್ಷೀಕರಿಸಿದ್ದಾರೆ. ಹಣವಿದ್ದರೆ ಏನನ್ನಾದರೂ ಕೊಳ್ಳಬಹುದು ಎಂಬ ಮನಸ್ಥಿತಿ ಸರಿಯಲ್ಲ. ಹಣದಿಂದ ಹಾಸಿಗೆಯನ್ನು ಮಾತ್ರ ಕೊಳ್ಳಬಹುದು, ನಿದ್ದೆಯನ್ನಲ್ಲ. ಟೀಕೆಗಳಿಗೆ ಕಿವುಡರಾದಾಗ ಮಾತ್ರ ಸಾಧನೆ ಸಾಧ್ಯ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಬಸವಣ್ಣ, ಮೈಸೂರು ಜಿಲ್ಲಾ ವೈಜ್ಞಾನಿಕ ಪರಿಷತ್ ಅಧ್ಯಕ್ಷೆ ಬಾಸ್ಪಾಂಜಲಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 622 ಅಂಕ ಪಡೆದ ಕಾರ್ಮೆಲ್ ಶಾಲೆಯ ವಿದ್ಯಾರ್ಥಿ ಕುಮಾರ್ ಅವರನ್ನು ಅಭಿನಂದಿಸಲಾಯಿತು.
ಪ್ರಗತಿ ಪರ ರೈತ ಹುಳಿಮಾವು ಶ್ರೀಕಂಠ ಸ್ವಾಮಿ, ಉಪನ್ಯಾಸಕ ಗುರು ಬೊಕ್ಕಹಳ್ಳಿ, ಬಳಗದ ಕಾರ್ಯದರ್ಶಿ ಪ್ರಭುಸ್ವಾಮಿ, ನಂಜನಗೂಡು ತಾಲೂಕು ವೈರಾಗ್ಯ ನಿಧಿ ಅಕ್ಕಾ ಮಹಾದೇವಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಮಾವತಿ ಮಹದೇವ ಸ್ವಾಮಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮೀನಾಕ್ಷಿ ಬಸವಣ್ಣ, ಸುಂದರಮ್ಮ ಮೋಹನ್, ಅರಸು, ಬಾಲಪ್ರಭು, ಮಹದೇವಸ್ವಾಮಿ, ಶಿವಕುಮಾರ್, ಸುಗಮ ಸಂಗೀತ ಗಾಯಕ ಬಿಳಿಗೆರೆ ಶಿವಶಂಕರ, ಗುರುಸ್ವಾಮಿ, ಮೈಸೂರಿನ ಶ್ರೀ ಗುರು ಮಲ್ಲೇಶ್ವರ ಭಜನಾ ಸಂಘದ ನಾಗೇಂದ್ರ, ಮಾದಪ್ಪ, ಬಸವಣ್ಣ, ನಿವೃತ್ತ ಅಧಿಕಾರಿಗಳಾದ ಮುತ್ತುರಾಜು, ಪರಶಿವಪ್ಪ, ಬಳಗದ ಸಂಚಾಲಕ ಗುರು ಸಿದ್ದಪ್ಪ ಹಾಜರಿದ್ದರು.