ನಿರಂತರ ನೀರು ಸರಬರಾಜು ಕಾಮಗಾರಿ ವೇಗ ಹೆಚ್ಚಿಸಿ

Palike
Published on

ಕಲಬುರಗಿ: ವಿಶ್ವಬ್ಯಾಂಕ್ ನೆರವಿನೊಂದಿಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ, ನಗರ ನೀರು ಸರಬರಾಜು ಆಧುನೀಕರಣ ಕುಸ್ಸೆಂಪ್ ಯೋಜನೆಯಡಿ ಸಿಟಿಯಲ್ಲಿ ೨೪*೭ ನಿರಂತರ ನೀರು ಸರಬರಾಜು ಯೋಜನೆ ಕಾಮಗಾರಿ ವೇಗ ಹೆಚ್ಚಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಮಾತನಾಡಿ, ನಿರಂತರ ನೀರು ಸರಬರಾಜು ಯೋಜನಾ ಕಾಮಗಾರಿ ಮಂದಗತಿಯಲ್ಲಿ ನಡೆದಿದೆ. ಇಂದಿನಿಂದ ತೀವ್ರಗತಿಯಲ್ಲಿ ನಡೆಯಬೇಕು ಎಂದರು.

ಯೋಜನೆಗಾಗಿ ನಗರದಲ್ಲಿ ಹಾಳು ಮಾಡಿದ ಎಲ್ಲ ರಸ್ತೆ ದುರಸ್ತಿ ಮಾಡಬೇಕು. ಹಳೆಯ ಫಿಲ್ಟರ್ ಬೆಡ್, ಎಚ್‌ಎಸ್‌ಎಂ ಧನಗಾರವಾಡ, ಎಸ್‌ಬಿ ಟ್ಯಾಂಕ್, ಶೋರಗುಂಬಜ್-ಮದರ್‌ಟ್ಯಾಂಕ್, ಗಣೇಶ ನಗರದಲ್ಲಿ ನಿರ್ಮಿಸುತ್ತಿರುವ ನೀರು ಸಂಗ್ರಹಗಾರಗಳು ಜನವರಿ ಅಂತ್ಯಕ್ಕೆ ಪೂರ್ಣಗೊಳಿಸಬೇಕು ಎಂದು ಕಂಪನಿಯ ಮುಖ್ಯಸ್ಥರಿಗೆ ಆದೇಶಿಸಿದರು.

ಕುಸ್ಸೆಂಪ ಯೋಜನಾ ಅನುಷ್ಠಾನ ಘಟಕದ ಅಧೀಕ್ಷಕ ಅಭಿಯಂತರ ಕೆ. ಕಾಂತರಾಜ್, ಸ್ಮೇಕ್ ಯೋಜನಾ ಸಮಾಲೋಚಕರ ತಂಡದ ನಾಯಕ ಶಿವಶರಣಪ್ಪ ರಾಯಕೋಡಿ, ಪಾಲಿಕೆಯ ಕಾರ್ಯಪಾಲಕ ಅಭಿಯಂತರ ಕೆ.ಎಸ್.ಪಾಟೀಲ್, ಎಲ್ ಆಂಡ್ ಟಿ ಕಂಪನಿಯ ಕುಮಾರಸೇನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net