ನಿರಂತರ ಅಧ್ಯಯನದಿಂದ ಉತ್ತಮ ಫಲಿತಾಂಶ ಸಾಧ್ಯ

24-pnp 3
Published on

ಪಾಂಡವಪುರ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಶ್ರಮಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಸ್.ಎಲ್.ಮುರಳೀಧರ್ ಹೇಳಿದರು.

ತಾಲೂಕಿನ ಚಿನಕುರಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಧರ್ಮಸ್ಥಳ ಸಂಸ್ಥೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಮೂರು ತಿಂಗಳ ವಿಶೇಷ ತರಗತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಓದಿನಲ್ಲಿ ಹಿಂದೆ ಉಳಿದಿರುವ ವಿದ್ಯಾರ್ಥಿಗಳ ಓದಿನ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಗತಿ ನೀಡಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿಸುವ ಕೆಲಸ ಮಾಡುತ್ತಿದೆ. ಅದರಂತೆ ಚಿನಕುರಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಮೂರು ತಿಂಗಳ ಕಾಲ ವಿಶೇಷ ತರಗತಿ ನಡೆಸಿ ಅದಕ್ಕೆ ತಗಲುವ ಹಣದ ವೆಚ್ಚವನ್ನು ಸಂಸ್ಥೆಯಿಂದಲೇ ಭರಿಸಲಾಗಿದೆ. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಗುರಿಯಾಗಿಸಿಕೊಂಡು ಶ್ರದ್ಧೆ, ಏಕಾಗ್ರತೆಯಿಂದ ನಿರಂತರ ಅಭ್ಯಾಸ ಮಾಡಿ ಉತ್ತಮ ಸಾಧನೆಯೊಂದಿಗೆ ಶಾಲೆಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜನ ಜಾಗೃತಿ ವೇದಿಕೆ ಸದಸ್ಯ ಸಿ.ಡಿ.ಮಹದೇವು ಮಾತನಾಡಿ, ಧರ್ಮಸ್ಥಳ ಸಂಸ್ಥೆ ಕೈಗೊಳ್ಳುವ ಮಾದರಿ ಕಾರ್ಯಕ್ರಮಗಳಿಂದಾಗಿ ಗ್ರಾಮೀಣ ಭಾಗದ ಜನ ಜೀವನ ಮಟ್ಟ ಸುಧಾರಣೆ ಕಾಣುತ್ತಿದೆ ಎಂದರು.

ಕಾಲೇಜಿನ ಉಪಪ್ರಾಂಶುಪಾಲೆ ಎಂ.ಎಸ್.ಜಯಶ್ರೀ, ಶಿಕ್ಷಕಿ ತೇಜಸ್ವಿನಿ, ತಾಲೂಕು ಯೋಜನಾಧಿಕಾರಿ ಎಸ್.ಯಶವಂತ್, ವಲಯ ಮೇಲ್ವಿಚಾರಕಿ ಸುಷ್ಮಾ, ಸೇವಾಪ್ರತಿನಿಧಿ ಜಯಶೀಲಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ತೇಜಸ್ವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net