

ಕಾರವಾರ: ಕೆಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆ ಬಗ್ಗೆ ಭಿನ್ನ, ವಿಭಿನ್ನ ಸ್ವರೂಪದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಉತ್ತರ ಕನ್ನಡದಲ್ಲಿ ಪಂಚರತ್ನ ಯಾತ್ರೆ ಆರಂಭಿಸಲು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಬುಧವಾರ ಆಗಮಿಸಿದ ಕುಮಾರಸ್ವಾಮಿ ಅವರಿಗೆ ಇಂಥದ್ದೇ ಒಂದು ಸನ್ನಿವೇಶ ಎದುರಾಯಿತು. ನೀವು ಬ್ರಾಹ್ಮಣ ಸಮಾಜದ ಕುರಿತು ನೀಡಿದ ಹೇಳಿಕೆ ನಮಗೆ ಬೇಸರ ತಂದಿದೆ ಎಂದು ಅರ್ಚಕರೊಬ್ಬರು ಎಚ್.ಡಿ.ಕುಮಾರಸ್ವಾಮಿ ಅವರನ್ನು ದೇವಸ್ಥಾನದ ಆವರಣದಲ್ಲಿಯೇ ನಯವಾಗಿ ತರಾಟೆಗೆ ತೆಗೆದುಕೊಂಡರು.
ನರಸಿಂಹ ದೀಕ್ಷಿತ ಎಂಬುವವರು ಮಹಾಬಲೇಶ್ವರ ಮಂದಿರದ ಆವರಣದಲ್ಲಿಯೇ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ನಿಮ್ಮ ತಂದೆ ಹಾಗೂ ನಿಮ್ಮ ಬಗ್ಗೆ ಅಪಾರ ಗೌರವವಿದೆ. ಆದರೆ, ನಿನ್ನೆ ನೀಡಿದ ಹೇಳಿಕೆಯಿಂದ ಬೇಸರವಾಗಿದೆ. ಅದಕ್ಕೆ ಇಲ್ಲಿಂದಲೇ ಸ್ಪಷ್ಟನೆ ನೀಡಬೇಕು ಎಂದು ಕುಮಾರಸ್ವಾಮಿ ಅವರ ಬಳಿ ನೇರವಾಗಿ ಹೇಳಿದರು.ಕುಮಾರಸ್ವಾಮಿ ಅವರು, ನಾನು ಬ್ರಾಹ್ಮಣರ ಜತೆಯೇ ಬೆಳೆದವನು. ಇದರಿಂದ ಸಂಸ್ಕಾರಗಳು ನನಗೆ ಬಂದಿದೆ. ನಾನು ಬ್ರಾಹ್ಮಣರ ವಿರುದ್ಧ ಹೇಳಿಕೆ ನೀಡಿಲ್ಲ. ಪೇಶ್ವೆ ವಂಶದ ಡಿಎನ್‌ಎ ಹೊಂದಿದವರು ಎಂದಿದ್ದೇನೆ. ಅದನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ' ಎಂದು ತಿಳಿ ಹೇಳಿದರು.