ನಿದ್ರೆ, ಆಹಾರ ಬಿಟ್ಟು ಓದುವುದನ್ನು ಬಿಡಿ

06-kkr2(3-25
Published on

ಕಿಕ್ಕೇರಿ: ಉತ್ತಮ ಫಲಿತಾಂಶ ಪಡೆಯುವ ಅವಕಾಶ ನಿಮ್ಮ ಕೈಯಲ್ಲಿದ್ದು ಓದುವ ಮನಸ್ಸಿನಲ್ಲಿ ವಿಚಲಿತವಾಗದೆ ಏಕಾಗ್ರತೆ ಬೆಳೆಸಿಕೊಳ್ಳಿ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ತಿಳಿಸಿದರು.

ಇಲ್ಲಿನ ಕೇಂಬ್ರಿಡ್ಜ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಪ್ರೇರಣಾ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಪ್ರತಿ ನಿಮಿಷ ತಮ್ಮ ಭವಿಷ್ಯದ ಗಂಟೆಯಾಗಿದೆ ಎಂಬ ಎಚ್ಚರಿಕೆ ಇರಲಿ. ಟಿವಿ, ಮೊಬೈಲ್‌ಗಳಿಂದ ದೂರವಿರಿ. ನಿಮ್ಮ ಭವಿಷ್ಯ ನಿಮ್ಮಲ್ಲಿಯೇ ಇದೆ ಎಂದರು.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಕಲಿತಷ್ಟು ಮೊದಲು ಆತ್ಮಸ್ಥೈರ್ಯದಿಂದ ಬರೆಯುವುದನ್ನು ಕಲಿಯಿರಿ. ನಿದ್ರೆ, ಆಹಾರ ಬಿಟ್ಟು ಓದುವುದನ್ನು ಬಿಡಿ. ಪರೀಕ್ಷೆಗೆ ಸಾಕಷ್ಟು ಸಮಯವಿದೆ. ಗಲಿಬಿಲಿಗೊಳ್ಳದೆ ಕಲಿತಷ್ಟು ಸ್ಪಷ್ಟವಾಗಿ ಬರೆಯಿರಿ. ತಮ್ಮಲ್ಲಿ ಅಗಾಧ ಪ್ರತಿಭೆ ಇದ್ದು ಅಂಜಿಕೆ ಬಿಡಿ. ಪರೀಕ್ಷಾ ವಿಷಯದಲ್ಲಿ ಗೊಂದಲವೇ ಬೇಡ. ಸಣ್ಣ ಅನುಮಾನವಿದ್ದರೂ ತಪ್ಪದೆ ಶಿಕ್ಷಕರನ್ನು ಕೇಳಿ ಬಗೆಹರಿಸಿಕೊಳ್ಳಿ. ಈ ಬಾರಿಯೂ ಕೂಡ ವೆಬ್‌ಕಾಸ್ಟ್ ರೀತಿಯಲ್ಲಿ ಪರೀಕ್ಷೆ ಇದೆ. ಯಾವುದೇ ನಕಲು ಮಾಡಲು ಅವಕಾಶವಿಲ್ಲ ಎಂದು ಹೇಳಿದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಮಾತನಾಡಿ, ಹೋಬಳಿಯಲ್ಲಿ ಈ ಬಾರಿ 529ವಿದ್ಯಾರ್ಥಿಗಳು ಸೇರಿದಂತೆ ತಾಲೂಕಿನಲ್ಲಿ ಒಟ್ಟು 2,695ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ಮನೆ ಮನೆಗೆ ತೆರಳಿ ಪಾಲಕರು ಮಕ್ಕಳ ಓದಿಗೆ ಕೈಗೊಂಡಿರುವ ಕ್ರಮ ಕುರಿತು ಚರ್ಚೆ, ಸ್ನೇಹಮಯಿ ವಾತಾವರಣ ಮೂಡಿಸಲಾಗಿದೆ. ಪರೀಕ್ಷೆ ಮುಗಿಯುವವರಿಗೆ ಟಿವಿ, ಮೊಬೈಲ್‌ನಿಂದ ದೂರವಿರಿ. ಓದಿನ ನಡುವೆ ವಿಶ್ರಾಂತಿಗಾಗಿ ಲಘು ಸಂಗೀತ, ಧ್ಯಾನ ಮಾಡಿ. ಇದು ಮನಸ್ಸಿಗೆ ಶಕ್ತಿ ನೀಡಲಿದೆ. ನಿದ್ರೆ ಬಿಟ್ಟು ಓದಿಗೆ ಪರಿಶ್ರಮ ಹಾಕಿದರೆ ಓದಿದಷ್ಟು ಮರೆಯಬೇಕಾಗಲಿದೆ ಎಂದು ಸಲಹೆ ನೀಡಿದರು.

ಹೋಬಳಿಯ ಕೃಷ್ಣಾಪುರ, ಸಾಸಲು, ಮಾದಾಪುರ, ಐಕನಹಳ್ಳಿ, ಆನೆಗೊಳ ಸೇರಿದಂತೆ ಒಟ್ಟು 10ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಶಿಕ್ಷಣ ಸಂಯೋಜಕ ನವೀನ್‌ಕುಮಾರ್, ಹರೀಶ್, ವೀರಭದ್ರಯ್ಯ, ಕೃಷ್ಣನಾಯಕ್, ಕೆಪಿಎಸ್ ಶಾಲಾ ಉಪಪ್ರಾಂಶುಪಾಲ ಚಲುವನಾರಾಯಣ ಸ್ವಾಮಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ.ಬಸವರಾಜು, ಮುಖ್ಯ ಶಿಕ್ಷಕರಾದ ಮಮತಾ, ದೀಪಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net