

ಶಿರಸಿ: ಲಾಕ್ಡೌನ್ ಬಳಿಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೆ ಪ್ರಯಾಣಿಕರು ಹಿಂದೇಟು ಹಾಕುತ್ತಿರುವ ಪರಿಣಾಮ ಉತ್ತರ ಕನ್ನಡ ವಿಭಾಗವು ದಿನಕ್ಕೆ ಸರಾಸರಿ 48 ಲಕ್ಷ ರೂಪಾಯಿ ನಷ್ಟ ಅನುಭವಿಸುತ್ತಿದೆ.
ಕೋವಿಡ್- 19 ನಿಯಂತ್ರಣಕ್ಕೆ ಘೊಷಿಸಿದ್ದ ಲಾಕ್ಡೌನ್ ತೆರವುಗೊಳಿಸಿದ ನಂತರ ಮೇ 19ರಿಂದ ಬಸ್ ಸಂಚಾರ ಪ್ರಾರಂಭವಾಗಿದೆ. ಮೊದಲ ದಿನ 70 ಬಸ್ ಓಡಿಸುವ ಯೋಚನೆಯಲ್ಲಿದ್ದ ಅಧಿಕಾರಿಗಳಿಗೆ, ಪ್ರಯಾಣಿಕರ ಕೊರತೆಯಿಂದಾಗಿ ಕೇವಲ 11 ಬಸ್ ಸಂಚಾರಕ್ಕೆ ಸಾಧ್ಯವಾಯಿತು. ಪೇಟೆ- ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದು, ಜನಜೀವನ ಸಹಜ ಸ್ಥಿತಿಗೆ ಬಂದರೂ, ಜನರು ಬಸ್ನಲ್ಲಿ ಪ್ರಯಾಣಕ್ಕೆ ಮುಂದಾಗುತ್ತಿಲ್ಲ.
ಕೋವಿಡ್-19 ಪೂರ್ವದಲ್ಲಿ ಜಿಲ್ಲೆಯಿಂದ ದಿನಕ್ಕೆ 105 ಬಸ್ಗಳ ಕಾರ್ಯಾಚರಣೆ ಇರುತ್ತಿತ್ತು. ಈಗ ದಿನಕ್ಕೆ ಸರಾಸರಿ 35 ಬಸ್ಗಳು ಕಾರ್ಯಾಚರಣೆ ನಡೆಸುತ್ತಿವೆ. ಆಗ ಪ್ರತಿದಿನ 50 ಲಕ್ಷ ರೂ. ನಷ್ಟು ಆದಾಯ ಸಂಗ್ರಹವಾಗುತ್ತಿತ್ತು. ಆದರೆ, ಈಗ ದಿನವೊಂದಕ್ಕೆ 1.5 ಲಕ್ಷ ರೂ. ಮಾತ್ರ ಸಂಗ್ರಹವಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲ ತಾಲೂಕು, ಹೊರ ಜಿಲ್ಲೆ, ಬೆಂಗಳೂರಿಗೆ ಬಸ್ ಸಂಚರಿಸುತ್ತಿವೆ. ಆದರೆ, ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಿದೆ. ಇಲ್ಲಿಂದ ಹೊರಡುವ ಬಸ್ಗಳು ತಾಲೂಕು ಕೇಂದ್ರದ ನಿಲ್ದಾಣದಲ್ಲಿ ಮಾತ್ರ ನಿಂತು, ಮುಂದೆ ಸಾಗುತ್ತವೆ ಎನ್ನುತ್ತಾರೆ ಅಧಿಕಾರಿಗಳು.
ಏಪ್ರಿಲ್- ಮೇ ತಿಂಗಳಿನಲ್ಲಿ ವಿಭಾಗದಲ್ಲಿ ದಿನವೊಂದಕ್ಕೆ 60 ಲಕ್ಷ ರೂ. ವರೆಗೂ ಆದಾಯ ಬರುತ್ತಿತ್ತು. ಈಗ ತಿಂಗಳಿಗೆ ಅಂದಾಜು 15 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಮೇ 31ಕ್ಕೆ ಲಾಕ್ಡೌನ್ 4.0 ಮುಗಿದು, ಹೊಸ ಮಾರ್ಗಸೂಚಿ ಪ್ರಕಟವಾಗಲಿದೆ. ಸರ್ಕಾರದ ಮಾರ್ಗಸೂಚಿ ಆಧರಿಸಿ ಸಾರಿಗೆ ಸಂಸ್ಥೆ ಹಳ್ಳಿಗಳಿಗೆ ಬಸ್ ಸಂಚಾರದ ಬಗ್ಗೆ ನಿರ್ಣಯ ಕೈಗೊಳ್ಳುತ್ತದೆ. | ವಿವೇಕ ಹೆಗಡೆ ವಿಭಾಗೀಯ ನಿಯಂತ್ರಣಾಧಿಕಾರಿ
ಉತ್ತರ ಕನ್ನಡ ಸಾರಿಗೆ ವಿಭಾಗ: *ದಿನವೊಂದಕ್ಕೆ ಒಟ್ಟು ಟ್ರಿಪ್ 3,400 *ದಿನಕ್ಕೆ ಸಂಚರಿಸುತ್ತಿದ್ದ ಬಸ್ಗಳು 501 * ಒಟ್ಟು ಚಾಲಕ-ನಿರ್ವಾಹಕರು 1,650
ಸುರಕ್ಷಾ ಕ್ರಮ ಇದ್ದರೂ ಹಿಂದೇಟು: ಶಿರಸಿಯಲ್ಲಿ ಹೊಸ ಬಸ್ ನಿಲ್ದಾಣದಿಂದಲೇ ಬಸ್ ಕಾರ್ಯಾಚರಣೆ ನಡೆಸುತ್ತಿವೆ. ನಿಲ್ದಾಣ ಪ್ರವೇಶಿಸಲು ಒಂದೇ ಗೇಟ್ ತೆರೆಯಲಾಗಿದ್ದು, ಅಲ್ಲಿಂದ ಬರುವ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಅವರ ವಿವರ ಪಡೆದು ಪ್ರಯಾಣಕ್ಕೆ ಅನುವು ಮಾಡಿಕೊಡಲಾಗುತ್ತದೆ. ಒಂದು ಬಸ್ನಲ್ಲಿ 30 ಜನರು ಪ್ರಯಾಣಿಸಲು ಅವಕಾಶವಿದೆ. ಇಷ್ಟೆಲ್ಲ ಸುರಕ್ಷತಾ ಕ್ರಮ ಅನುಸರಿಸುತ್ತಿದ್ದರೂ ಪ್ರಯಾಣಿಕರು ಬಸ್ನಲ್ಲಿ ತೆರಳಲು ಭಯಡುತ್ತಿರುವುದು ನಷ್ಟಕ್ಕೆ ಕಾರಣವಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.