ನಿಜ ನಾಗರ ಪೂಜಿಸಿ ಪಂಚಮಿ ಆಚರಣೆ

2sirsi2
Published on

ವಿಜಯವಾಣಿ ಸುದ್ದಿಜಾಲ ಶಿರಸಿ
ಇಲ್ಲಿನ ಉರಗ ರಕ್ಷಕ ಪ್ರಶಾಂತ ಹುಲೇಕಲ್ ಕುಟುಂಬದ ಸದಸ್ಯರು ಮಂಗಳವಾರ ನಿಜ ನಾಗರಕ್ಕೆ ಹಾಲೆರೆದು ನಾಗಪಂಚಮಿ ಪೂಜೆ ಆಚರಿಸಿದರು. ಪ್ರತಿ ವರ್ಷ ಒಂದು ನಾಗರಹಾವನ್ನು ಪೂಜೆ ಮಾಡುತ್ತಿದ್ದ ಪ್ರಶಾಂತ ಕುಟುಂಬ ಈ ಭಾರಿ ಮೂರು ನಾಗರ ಹಾವುಗಳನ್ನು ತಂದು ಪೂಜೆ ಸಲ್ಲಿಸಿರೋದು ವಿಶೇಷ.
ಕಳೆದ ಮೂವತ್ತೇಳು ವರ್ಷಗಳಿಂದ ನಿರಂತರವಾಗಿ ಉರಗ ಸಂತತಿಯ ಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿಯನ್ನು ತೋರುತ್ತ ಬಂದಿರುವುದು ಪ್ರಶಾಂತ ಹುಲೇಕಲ್ ಕುಟುಂಬ. ಪ್ರತಿ ನಾಗರ ಪಂಚಮಿ ಹಬ್ಬವನ್ನು ನಾಗ ಸಂತತಿಯ ಬಗ್ಗೆ ಸಂದೇಶ ಸಾರುವ ಸಂದರ್ಭವನ್ನಾಗಿ ಬಳಸಿಕೊಳ್ಳುತ್ತಿದೆ. ಕುಟುಂಬದ ಹಿರಿಯ ಸುರೇಶ ಮರಣದ ಬಳಿಕ ಅವರ ಮಕ್ಕಳಾದ ಪ್ರಶಾಂತ ನಿಜವಾದ ಹಾವಿಗೆ ಪೂಜೆ ಸಲ್ಲಿಸಿ ನಾಗಪಂಚಮಿ ಆಚರಣೆ ಮಾಡುತ್ತಿದ್ದಾರೆ. ವಿಷದ ಹಲ್ಲುಗಳಿರುವ ಸರ್ಪಗಳನ್ನು ಮನೆಯೊಳಗೆ ಪ್ರತಿಷ್ಠಾಪಿಸಿ ಇತರರು ಕಲ್ಲು ನಾಗರಗಳಿಗೆ ಹಾಲೆರೆದಂತೆ ಹಾಲೆರೆದು ಪೂಜೆ ಮಾಡುವ ಪದ್ದತಿ ಅನುಸರಿಸುತ್ತಿದ್ದಾರೆ. ಇನ್ನು ಪ್ರಶಾಂತ ಪತ್ನಿ, ಮಗಳು ಹಾಗೂ ಮಗ ಕೂಡ ನಿಜ ಹಾವನ್ನು ಕಂಡು ಭಯ ಪಡದೆ ಪೂಜೆ ಸಲ್ಲಿಸೋದು ನಿಜಕ್ಕೂ ಆಶ್ಚರ್ಯ ಪಡುವಂತದ್ದು. ಮನೆಯ ಸದಸ್ಯರೆಲ್ಲ ಸೇರಿ ಹೂವು, ಅಕ್ಷತೆ ಹಾಕಿ ಆರತಿ ಬೆಳಗಿ ನಾಗಪಂಚಮಿ ಆಚರಿಸಿ ಸಂಭ್ರಮಿಸಿದರು. ಇದನ್ನು ನೋಡಲು ಬರುವ ಭಕ್ತರು ಕೂಡ ನಿಜ ನಾಗರಕ್ಕೆ ಪೂಜೆ ಸಲ್ಲಿಸಿದರು. ಕೆಲವು ವರ್ಷದಿಂದಲೂ ಕಾಡಿಗೆ ಹೋಗಿ ಹಾವು ಹಿಡಿದು ಪೂಜೆ ಸಲ್ಲಿಸುತ್ತಿದ್ದ ಬರುತ್ತಿದ್ದ ಪ್ರಶಾಂತ ಕುಟುಂಬ ಇದೀಗ ಮನೆಯಲ್ಲೆ ಹಾವು ತಂದು ಪೂಜೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net