ನಿಗದಿತ ಸಮಯದಲ್ಲಿ ಕಾಮಗಾರಿಗಳು ಪೂರ್ಣ

Oplus_16908288
Oplus_16908288
Published on

ನಂಜನಗೂಡು: ನಿಗದಿತ ಸಮಯದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ ಎಂದು ನಗರಸಭಾ ಅಧ್ಯಕ್ಷ ಶ್ರೀಕಂಠ ತಿಳಿಸಿದರು.

ನಗರದಲ್ಲಿ ಗುರುವಾರ ಅಧಿಕಾರಿಗಳು ಹಾಗೂ ಸದಸ್ಯರ ಜತೆಗೂಡಿ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿ ಮಾತನಾಡಿದರು.

ಕೆಲವು ದಿನಗಳ ಹಿಂದೆ ನಗರ ನಗರಸಭಾ ಸಾಮಾನ್ಯ ನಿಧಿಯಿಂದ ಸುಮಾರು ಏಳು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಲಾಗಿತ್ತು. ಮಳೆ ಹಿನ್ನೆಲೆಯಲ್ಲಿ ಕಾಮಗಾರಿಗಳು ವಿಳಂಬಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಕಾಮಗಾರಿಯ ಗುಣಮಟ್ಟ ಹಾಗೂ ಪ್ರಗತಿ ಕುಂಟುತ್ತಿದೆ ಎಂಬ ದೂರುಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದವು. ಈ ಕಾರಣ ನಗರಸಭೆಯಿಂದ ಅಧಿಕಾರಿಗಳು ಮತ್ತು ಸದಸ್ಯರನ್ನು ಒಳಗೊಂಡಂತೆ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡುತ್ತಿದ್ದೇವೆ. 16ನೇ ವಾರ್ಡ್‌ನ ಅಂಬೇಡ್ಕರ್ ಮಂಟಪ, 18ನೇ ವಾರ್ಡ್‌ನ ಗಾಯತ್ರಿ ಮಂತ್ರಾಲಯ ದೇವಾಲಯದ ಕಮಾನು, ಹೌಸಿಂಗ್ ಬೋರ್ಡ್‌ನಲ್ಲಿರುವ ಉದ್ಯಾನ, ಎನ್‌ಎಸ್‌ಎಸ್ ಕಾನ್ವೆಂಟ್ ಮುಂಭಾಗದಲ್ಲಿರುವ ರಸ್ತೆ ಕಾಮಗಾರಿಗಳು ಗುಣಮಟ್ಟದಾಗಿದ್ದು, ನಿಗದಿತ ಸಮಯದ ಒಳಗೆ ಪೂರ್ಣಗೊಳ್ಳಲಿದ್ದು, ನಂಜನಗೂಡು ನಗರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.

ನಗರಸಭಾ ಸದಸ್ಯ ಮಹದೇವಪ್ರಸಾದ್, ಪ್ರದೀಪ್, ಇಂಜಿನಿಯರ್ ಸಮಂತ್, ಎಇ ಪ್ರತಿಮಾ, ಎಇಇ ಶರ್ಮಿಳಾ ಹಾಗೂ ನಗರಸಭಾ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net