ನಿಗದಿತ ವೇಳೆಗೆ ಕೇಂದ್ರ ತಲುಪಿದ ಮಕ್ಕಳು

3KMT2
Published on

ಕುಮಟಾ: ತಾಲೂಕಿನ ಯಾಣ ರಸ್ತೆಯಲ್ಲಿ ಮುರಿದು ಬಿದ್ದ ಬೃಹತ್ ಮರದ ಟೊಂಗೆಗಳನ್ನು ಬರಿಗೈಯಲ್ಲೇ ತುಂಡು ಮಾಡಿ ತೆರವುಗೊಳಿಸಿದ ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕ ಬಸ್​ನಲ್ಲಿದ್ದ ಎಸ್​ಎಸ್​ಎಲ್​ಸಿ ಪರೀಕ್ಷಾರ್ಥಿಗಳನ್ನು ಸುರಕ್ಷಿತವಾಗಿ ಪರೀಕ್ಷೆ ಕೇಂದ್ರಕ್ಕೆ ತಲುಪಿಸಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಯಾಣದಿಂದ ಮಿರ್ಜಾನದ ಎಸ್​ಎಸ್​ಎಲ್​ಸಿ ಪರೀಕ್ಷೆ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದಾಗ ದಟ್ಟ ಅರಣ್ಯದ ನಡುವೆ ರಸ್ತೆ ಅಡ್ಡವಾಗಿ ಮರ ಮುರಿದು ಬಿದ್ದಿತ್ತು. ಈ ವೇಳೆ ಮರ ಕಡಿದು ತೆರವುಗೊಳಿಸಲು ಕತ್ತಿ, ಕೊಡಲಿಯಂತಹ ಉಪಕರಣಗಳಿಲ್ಲದೆ ಪರದಾಡಿದ ಬಸ್ ಚಾಲಕ ಜಗದೀಶ ಪಟಗಾರ ಹಾಗೂ ನಿರ್ವಾಹಕ ಭಾಸ್ಕರ ಪಟಗಾರ ಅವರು ಸಮಯ ವ್ಯರ್ಥ ಮಾಡದೆ ಬರಿಗೈಯಲ್ಲಿ ಸಾಧ್ಯವಾದಷ್ಟು ಟೊಂಗೆ ಗಳನ್ನು ತೆರವುಗೊಳಿಸಿ ಬಸ್ ಸಾಗಲು ಬೇಕಾದಷ್ಟು ಮಾರ್ಗ ಮಾಡಿಕೊಂಡರು. ರಸ್ತೆಯ ಅಂಚುಗಳು ಕುಸಿಯುವಂತಿದ್ದರೂ ಜಾಗರೂಕತೆಯಿಂದ ಬಸ್ ಚಲಾಯಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಕೇಂದ್ರಕ್ಕೆ ನಿಗದಿತ ಸಮಯದಲ್ಲಿ ತಲುಪಿಸುವಲ್ಲಿ ಯಶಸ್ವಿಯಾದರು. ವಿಷಯ ತಿಳಿದ ಶಿಕ್ಷಣ ಸಚಿವ ಸುರೇಶ ಕುಮಾರ ಸಾಮಾಜಿಕ ಜಾಲತಾಣದಲ್ಲಿ ಕುಮಟಾ ಸಾರಿಗೆ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net