

ವಿಜಯವಾಣಿ ಸುದ್ದಿಜಾಲ ಕಾರವಾರ
ಕೋಂಕಣ ರೈಲ್ವೆ ಮಾರ್ಗದಲ್ಲಿ ಮಡಗಾಂವ-ಮಂಗಳೂರು ಮೆಮು ರೈಲು ಓಡಾಟ ಜ.5 ರಿಂದ ಪ್ರಾರಂಭವಾಗಲಿದೆ. ಈ ಹಿಂದೆ ಸಂಚರಿಸುತ್ತಿದ್ದ ಡೀಸೆಲ್ ಮಲ್ಟಿಪಲ್ ಯುನಿಟ್(ಡೆಮು) ರೈಲು ಕೋವಿಡ್ ಕಾರಣ ಸ್ಥಗಿತವಾಗಿತ್ತು. ಮಾರ್ಗವು ಸಂಪೂರ್ಣ ವಿದ್ಯುದೀಕರಣವಾದ ಬಳಿಕ ಮೇನ್‌ಲೈನ್ ಇಲೆಕ್ಟಿçಕ್ ಮಲ್ಟಿಪಲ್ ಯುನಿಟ್(ಮೆಮು) ರೈಲು ಓಡಾಟ ಪ್ರಾರಂಭಿಸುವಂತೆ ಪ್ರಯಾಣಿಕರು ಒತ್ತಾಯಿಸಿದ್ದರು. ಕಾರವಾರದಿಂದ ಮಂಗಳೂರು, ಉಡುಪಿಯ ಆಸ್ಪತ್ರೆಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ ಎಂಬುದು ಜನರ ಒತ್ತಾಯವಾಗಿತ್ತು.
ಈಗ ಜ.5 ರಿಂದ ರೈಲು ಸಂಖ್ಯೆ 10107 ರೈಲು ಪ್ರತಿ ಸೋಮವಾರದಿಂದ ಶನಿವಾರದವರೆಗೆ 6 ದಿನ ಬೆಳಗ್ಗೆ 5.15 ಕ್ಕೆ ಮಡಗಾಂವ ಜಂಕ್ಷನ್ ಬಿಟ್ಟು 12.15 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ರೈಲು ಸಂಖ್ಯೆ 10108 ಸೋಮವಾರದಿಂದ ಶನಿವಾರದವರೆಗೆ 6 ದಿನ ಮಧ್ಯಾಹ್ನ 2.45 ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ಬಿಟ್ಟು ರಾತ್ರಿ 10 ಗಂಟೆಗೆ ಮಡಗಾಂವ ತಲುಪಲಿದೆ. ಭಾನುವಾರ ಈ ರೈಲಿನ ಸಂಚಾರ ಇರುವುದಿಲ್ಲ.
08 ಕಾರ್ ಮೆಮು ಕೋಚ್‌ಗಳನ್ನು ಈ ರೈಲು ಹೊಂದಿದ್ದು, ಕಾಣಕೋಣ, ಅಸ್ನೋಟಿ, ಕಾರವಾರ, ಅಂಕೋಲಾ, ಗೋಕರ್ಣ, ಕುಮಟಾ, ಹೊನ್ನಾವರ, ಮಂಕಿ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್, ಬೈಂದೂರ್, ಸೇನಾಪುರ, ಕುಂದಾಪುರ, ಬಾರ್ಕೂರು, ಉಡುಪಿ, ಮುಲ್ಕಿ, ಸುರತ್ಕಲ್ ನಿಲ್ದಾಣಗಳಲ್ಲಿ ಈ ರೈಲು ನಿಲ್ಲಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.