ನಾಳೆಯಿಂದ ಅಖಿಲ ಭಾರತ ಸಹಕಾರ ಸಪ್ತಾಹ:20ಕ್ಕೆ ಸಮಾರೋಪ

GT Devegowda
Published on

ಬೆಂಗಳೂರು: ಸಹಾರ ಇಲಾಖೆಯಿಂದ ಮಾಜಿ ಪ್ರಧಾನಿ ದಿ. ಜವಾಹರಲಾಲ್​ ನೆಹರು ಜನ್ಮದಿನ ಪ್ರಯುಕ್ತ ನ.14ರಿಂದ 20ರವರೆಗೆ "ಅಖಿಲ ಭಾರತ ಸಹಕಾರ ಸಪ್ತಾಹ' ಕಾರ್ಯಕ್ರಮ ನಡೆಯಲಿದೆ.

ರಾಜ್ಯ ಸಹಕಾರ ಮಹಾಮಂಡಳ, ಅಪೆಕ್ಸ್​ ಸಹಕಾರ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ (ನ.14) ಬೆಳಗ್ಗೆ 11ಕ್ಕೆ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.15ಕ್ಕೆ ಚಿತ್ರದುರ್ಗ, 16ಕ್ಕೆ ಮಂಗಳೂರು, 17ಕ್ಕೆ ಬಾಗಲಕೋಟೆ, 18ಕ್ಕೆ ಬೀದರ್​, 19ಕ್ಕೆ ಚಿಕ್ಕಮಗಳೂರಿನಲ್ಲಿ ಕಾರ್ಯಕ್ರಮ ಇದ್ದರೆ ಹಾಗೂ 20ರಂದು ಬೆಳಗಾವಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಬಾಗಲಕೋಟೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ "ಸಹಕಾರ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ.ದೇವೇಗೌಡ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

"ವಿಕಸಿತ ಭಾರತ ನಿಮಾರ್ಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ' ಧ್ಯೇಯದೊಂದಿಗೆ ಪ್ರತಿನಿತ್ಯ ಸಹಕಾರ ಕ್ಷೇತ್ರದ ಕುರಿತು ಉಪನ್ಯಾಸ, ಚಿಂತನ&ಮಂಥನ ನಡೆಯಲಿದೆ. ಸಹಕಾರ ಚಳವಳಿಯ ಸಾಧನೆ& ವೈಲ್ಯ ಕುರಿತು ಜನರಿಗೆ ಮನವರಿಕೆ ಮಾಡಲಾಗುತ್ತದೆ. ಎಲ್ಲ ಜಿಲ್ಲೆ, ತಾಲೂಕು, ಗ್ರಾಮಗಳಲ್ಲೂ ಕಾರ್ಯಕ್ರಮಗಳಿವೆ. ಸಹಕಾರ ಸಂಸ್ಥೆಗಳ ಕಟ್ಟಡಗಳ ಮೇಲೆ ಸಹಕಾರಿ ಧ್ವಜಾರೋಹಣ ನೆರವೇರಿಸಲಾಗುವುದು. ಸಪ್ತಾಹದ 7 ದಿನಗಳಲ್ಲೂ ಸಚಿವರು, ಆಯಾ ಭಾಗದ ಶಾಸಕರು, ಸಹಕಾರಿ ಮುಖಂಡರು ಸೇರಿ ಸಹಸ್ರಾರು ಜನರು ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು. ಮಂಡಳಿ ಎಂಡಿ ನವೀನ್​, ಮಹಾಮಂಡಳ ನಿರ್ದೇಶಕ ಡಾ. ಶೇಖರಗೌಡ ಮಾಲಿ ಪಾಟೀಲ್​, ಬಿ.ಸಿ.ಲೋಕಪ್ಪಗೌಡ, ಎಚ್​.ಎನ್​. ಅಶೋಕ, ಎ.ಸಿ.ನಾಗರಾಜು, ನಾಗರತ್ನ, ಆರ್​. ರಾಮರೆಡ್ಡಿ ಇದ್ದರು.

31 ಕೋಟಿ ಸದಸ್ಯರು: ರಾಷ್ಟ್ರದಲ್ಲಿ 8.5 ಲಕ್ಷ ಸಹಕಾರ ಸಂಸ್ಥೆಗಳಿಂದ 31 ಕೋಟಿ ಸದಸ್ಯರಿದ್ದಾರೆ. ರಾಜ್ಯದಲ್ಲಿ ವಿವಿಧ ಬಗೆಯ 47 ಸಾವಿರ ಸಹಕಾರ ಸಂಸ್ಥೆಗಳಿದ್ದು, 2 ಕೋಟಿ 70 ಲಕ್ಷ ಸದಸ್ಯರಿದ್ದಾರೆ. ಹೈನುಗಾರಿಕೆ, ಕೃಷಿಪತ್ತಿನ ಸಹಕಾರ ವ್ಯವಸ್ಥೆ, ಪಟ್ಟಣ ಸಹಕಾರ ಬ್ಯಾಂಕ್​ಗಳು, ಕೃಷಿಯೇತರ ಪತ್ತಿನ ಸಹಕಾರ ಸಂಗಳು ಅತ್ಯುತ್ತಮ ಸೇವೆ ಸಲ್ಲಿಸುತ್ತಿವೆ. 36 ಲಕ್ಷ ರೈತರಿಗೆ ಸಾಲ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ದೇವೇಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net