ನಾಲ್ವರು ಯುವತಿಯರು ಕ್ವಾರಂಟೈನ್​ಗೆ

carona logo
Published on

ಗೋಕರ್ಣ: ಮಹಾರಾಷ್ಟ್ರದಿಂದ ಶನಿವಾರ ಇಲ್ಲಿಗೆ ಆಗಮಿಸಿದ್ದ ನಾಲ್ವರು ಯುವತಿಯರನ್ನು ಕುಮಟಾದ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಅಲ್ಲಿ ಮೀನು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಇವರೆಲ್ಲ ಹತ್ತಿರದ ಗ್ರಾಮದಿಂದ ತೆರಳಿದ್ದರು. ಒಟ್ಟು 27 ಕೆಲಸಗಾರರು ಮಹಾರಾಷ್ಟ್ರದಿಂದ ಖಾಸಗಿ ವಾಹನ ಮಾಡಿಕೊಂಡು ಬಂದಿದ್ದರು. ಇನ್ನುಳಿದ 23 ಜನ ಅಂಕೋಲಾದಲ್ಲಿ ಇಳಿದಿದ್ದರು. ಅಂಕೋಲಾದಿಂದ ರಾಜ್ಯ ಸಾರಿಗೆ ಬಸ್​ನಲ್ಲಿ ಗೋಕರ್ಣಕ್ಕೆ ಬಂದ ಇವರ ಬಗ್ಗೆ ಆಶಾ ಕಾರ್ಯಕರ್ತೆಯೊಬ್ಬರು ಮಾಹಿತಿ ಪಡೆದರು. ಬಳಿಕ ಈ ಬಗ್ಗೆ ಸಂಬಂಧಿಸಿದ ಗ್ರಾಪಂ ಅಧ್ಯಕ್ಷರಿಗೆ ಸುದ್ದಿ ಮುಟ್ಟಿಸಿದರು. ಗೋಕರ್ಣ ಪ್ರಾಥಮಿಕ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿದರು. ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ, ಪಿಎಸ್​ಐ ನವೀನ್ ನಾಯ್ಕ ಸಹಾಯದಿಂದ ಇವರ ಬಗ್ಗೆ ಪೂರ್ಣ ವಿವರ ಪಡೆದು ಎಲ್ಲರನ್ನೂ ತಾಲೂಕು ಆರೋಗ್ಯಾಧಿಕಾರಿಗಳ ಬಳಿ ತಪಾಸಣೆಗೆ ಒಳಪಡಿಸಿದರು. ನಂತರ ಕುಮಟಾ ವಿಭಾಗೀಯ ಅಧಿಕಾರಿಗಳ ಆದೇಶದ ಮೇರೆಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಿದರು. ಕರೊನಾ ಪೀಡಿತ ಮಹಾರಾಷ್ಟ್ರದಿಂದ ಇವರೆಲ್ಲರೂ ಮಾರ್ಗ ಮಧ್ಯೆ ಯಾವುದೇ ತಪಾಸಣೆ ಇಲ್ಲದೆ ಖಾಸಗಿ ವಾಹನದಲ್ಲಿ ಬಂದಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net