ನಾಲ್ವರು ದುಷ್ಕರ್ಮಿಗಳ ಬಂಧನ

bkt-01-12
ಅಮೀನಗಡ ಪೊಲೀಸರ ವಶದಲ್ಲಿರುವ ನಾಲ್ವರು ದುಷ್ಕರ್ಮಿಗಳು
Published on

ಬಾಗಲಕೋಟೆ: ಕಾರಿನಲ್ಲಿ ದುಡ್ಡು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕಮತಗಿ ಪಟ್ಟಣದ ಬಳಿ ವಾಹನ ಅಡ್ಡಿಗಟ್ಟಿ ಕಣ್ಣಿಗೆ ಖಾರಪುಡಿ ಎರೆಚಿ ಲಕ್ಷಾಂತರ ರೂ. ಹಣ ದೋಚಿಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರೂ ಪ್ರಮುಖ ಆರೋಪಿಗಳಿಗಾಗಿ ಅಮೀನಗಡ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಆಗಸ್ಟ್ 24 ರಂದು ಗಂಗಾವತಿ ಮೂಲದ ಬಾಡಿಗೆ ಕಾರಿನಲ್ಲಿ 9 ಲಕ್ಷ ರೂ.ಗೂ ಅಧಿಕ ಹಣ ತೆಗೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಕಣ್ಣಿಗೆ ಖಾರಪುಡಿ ಎರೆಚಿ ಹಣ ದೋಚಿಕೊಂಡು ದುಷ್ಕರ್ಮಿಗಳು ಪರಾರಿ ಆಗಿದ್ದರು. ಈ ಬಗ್ಗೆ ದುಡ್ಡು ಕಳೆದುಕೊಂಡಿದ್ದ ಚನ್ನಬಸು ಎನ್ನುವವರು ಅಮೀನಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ಹಿನ್ನೆಲೆಯಲ್ಲಿ ಹುನಗುಂದ ಸಿಪಿಐ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಚನ್ನಬಸು ಕಾರು ಚಾಲಕನಾಗಿದ್ದ ರಿಯಾಜ್ ಈ ಬಗ್ಗೆ ಪ್ಲಾನ್ ಮಾಡಿದ್ದ ಎನ್ನುವುದು ಗೊತ್ತಾಗಿದೆ. ಕಾರಿನಲ್ಲಿ ದುಡ್ಡು ತರುತ್ತಿರುವ ಬಗ್ಗೆ ಚಂದ್ರಿ(ಚಂದ್ರಶೇಖರ) ಅವರಿಗೆ ಮಾಹಿತಿ ನೀಡಿದ್ದ. ಹೀಗಾಗಿ ಅವರು ಕಮತಗಿ ಬಳಿ ವಾಹನ ಬರುತ್ತಿದ್ದಾಗ ಅದನ್ನು ಅಡ್ಡಗಡ್ಡಿ ಹಣ ದೋಚಿದ್ದರು. ಗಂಗಾವತಿಯ ಅಕ್ಕಿ ಪಾಲೀಶ ಮಾಡುವ ಫ್ಯಾಕ್ಟರಿ
ಯಿಂದ ಈ ಹಣವನ್ನು ತಂದು ಬಾಗಲಕೋಟೆಯಲ್ಲಿ ಕೊಡಬೇಕಾಗಿತ್ತು. ಆದರೆ, ಮಾಲೀಕರ ಜೊತೆ ರಿಯಾಜ್ ವೈಮನಸ್ಸು ಉಂಟಾಗಿದ್ದರಿಂದ ಅವರಿಗೆ ಮೋಸ ಮಾಡುವ ಉದ್ದೇಶದಿಂದ ಚಂದ್ರಶೇಖರಗೆ ಅವರಿಗೆ ಮಾಹಿತಿ ನೀಡಿದ್ದ. ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾದ ಚಂದ್ರಿ ಈ ರೀತಿ ರಾಬರಿ ಮಾಡುತ್ತಿದ್ದರು ಎನ್ನಲಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಿ ಅಲಿಯಾಸ್ ಚಂದ್ರಶೇಖರ, ದಿಲೀಪ ರಾಠೋಡ ಎನ್ನುವವರು ತಲೆ ಮರೆಸಿಕೊಂಡಿದ್ದು ಉಳಿದಂತೆ ಚಾಲಕ ರಿಯಾಜ್ ಗುಳೇದಗುಡ್ಡ, ರಾಬರಿಯಲ್ಲಿ ಪಾಲ್ಗೊಂಡಿದ್ದ ಚಂದ್ರಿ ಅವರ ಸಹೋದರ ಶ್ರೀಕಾಂತ, ಗೌತಮ್ ರಾಠೋಡ ಮತ್ತು ಬಾಬು ಡಂಗಿ ಅವರನ್ನು ಪೊಲೀಸರು ಬಂಧಿಸಿ, ಉಳಿದಿಬ್ಬರಿಗಾಗಿ ಜಾಲ ಬೀಸಲಾಗಿದೆ ಎಂದು ಎಸ್ಪಿ ಜಯಪ್ರಕಾಶ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net