ನಾಲ್ವರು ಅವಿರೋಧ ಆಯ್ಕೆ

2 kollegal-3
Published on

ಕೊಳ್ಳೇಗಾಲ: ಪಟ್ಟಣದ ಭೀಮನಗರ ಬಡಾವಣೆಯ ಕಸಬಾ ಮನೆ (ಪರಿಶಿಷ್ಟ ಜಾತಿ) ಯಜಮಾನ ಸ್ಥಾನಕ್ಕೆ ಸೋಮವಾರ ನಾಲ್ವರು ಅವಿರೋಧ ಆಯ್ಕೆಯಾದರು.

ಭೀಮನಗರದ ನಿವಾಸಿಗಳಾದ ಎಂ.ವರದರಾಜು, ನಟರಾಜು, ಎಸ್.ಮಹಾದೇವಸ್ವಾಮಿ ಹಾಗೂ ಆನಂದ್ ಆಯ್ಕೆಗೊಂಡವರು. ಬಡಾವಣೆಯ ಶ್ರೀ ಬಸವನಗುಡಿ ದೇವಸ್ಥಾನದಲ್ಲಿ ದೊಡ್ಡ ಯಜಮಾನ ಚಿಕ್ಕಮಾಳಿಗೆ ಸೇರಿದಂತೆ ಇತರ ಯಜಮಾನರು, ಮಾಜಿ ಯಜಮಾನರು, ಹಿರಿಯ ಮುಖಂಡರು ಹಾಗೂ ಸಮಸ್ತ ಕುಲಸ್ಥರ ಸಮ್ಮುಖದಲ್ಲಿ ಸೋಮವಾರ ನಡೆದ 2025ನೇ ವರ್ಷದ ಪಂಚಾಂಗ ಶ್ರವಣ ಪೂಜಾ ಕೈಂಕರ್ಯ ಸಭೆಯಲ್ಲಿ ಸಂಪ್ರದಾಯದಂತೆ ವೀಳ್ಯ ಸ್ವೀಕರಿಸುವುದರೊಂದಿಗೆ ಅಧಿಕಾರ ವಹಿಸಿಕೊಂಡರು.

ಚಂದ್ರಮಾನ ಯುಗಾದಿ ಹಬ್ಬದವರೆಗೆ ಯಜಮಾನರಾಗಿದ್ದ ಕುಮಾರ್, ಎಸ್.ರಾಜಶೇಖರಮೂರ್ತಿ, ಎಂ.ಶಿವಪ್ಪ ಹಾಗೂ ನಿಂಗರಾಜು ಇದೀಗ ಮಾಜಿ ಯಜಮಾನರಾಗಿದ್ದು, ಯಜಮಾನ್ ಎಂ.ಪಾಪಣ್ಣ ಮುಂದಿನ ಯುಗಾದಿಯವರೆಗೆ ಯಜಮಾನಿಕೆ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಅಂತೆಯೇ ಏ.6ರಂದು ಇನ್ನೂ ಕೆಲ ಯಜಮಾನರ ಸ್ಥಾನ ಬದಲಾಗುವ ಸಾಧ್ಯತೆ ಇದೆ.

ಇದೇ ವೇಳೆ ಭೀಮನಗರದ ದೊಡ್ಡ ಯಜಮಾನರಾದ ಚಿಕ್ಕಮಾಳಿಗೆ ಮಾತನಾಡಿ, ತಾಲೂಕಿನ ದಲಿತ ಸಮುದಾಯದ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು. ಇದಕ್ಕೂ ಮೊದಲು ಸಭೆಯಲ್ಲಿ ಪಟ್ಟಣ ಶ್ರೀ ಮರಳೇಶ್ವರಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಡಾ.ನಾಗೇಂದ್ರ ಎನ್.ಭಟ್ ಪಂಚಾಂಗ ಶ್ರವಣ ಪಠಣಾ ಪೂಜೆ ನೆರವೇರಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಪಿ.ಮಲ್ಲಿಕಾರ್ಜುನ್, ಸಿ.ಬಾಬು, ಸನತ್‌ಕುಮಾರ್, ಸಿದ್ದಾರ್ಥ, ಪಿ.ಸೋಮಶೇಖರ್, ಕೆ.ಕೆ.ಮೂರ್ತಿ, ಶಿವರಾಳ, ಎಲ್.ಲಿಂಗರಾಜು, ಎಸ್.ಎಲ್.ಲಿಂಗರಾಜು, ನಿವೃತ್ತ ಅಧಿಕಾರಿ ಎಸ್.ಆನಂದಮೂರ್ತಿ, ನಿವೃತ್ತ ಪೊಲೀಸ್ ಅಧಿಕಾರಿ ಗುರುಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net