

ಕೆ.ಆರ್.ನಗರ: ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ, ಆದರ್ಶ ಮತ್ತು ಅವರ ಕೊಡುಗೆ ಭವಿಷ್ಯದ ಪೀಳಿಗೆ ಮತ್ತು ನಾಯಕರ ಬದುಕಿಗೆ ಪ್ರೇರಣೆ ಮತ್ತು ಮಾದರಿಯಾಗಿದ್ದು, ಅದೊಂದು ಸುವರ್ಣಯುಗ ಎಂದು ಮೈಸೂರು ಮತ್ತು ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಣ್ಣಿಸಿದರು.
ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಸಮುದಾಯ ಭವನದಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ನಾಗರಿಕ ವೇದಿಕೆಯಿಂದ ಸೋಮವಾರ ಏರ್ಪಡಿಸಿದ್ದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ ಅವರ ಪೌರ ಸನ್ಮಾನ ಮತ್ತು ವೈದ್ಯಕೀಯ ಸ್ನಾತಕೋತ್ತರ ಪದವಿಯಲ್ಲಿ ರಾಜ್ಯಕ್ಕೆ 3ನೇ ರ‌್ಯಾಂಕ್ ಪಡೆದ ಡಾ.ಸಾ.ರಾ.ಧನುಷ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾನು ಇಂದು ನಿಮ್ಮ ಮುಂದೆ ವೇದಿಕೆ ಮೇಲೆ ನಿಂತು ಮಾತನಾಡಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಯೇ ಕಾರಣವಾಗಿದ್ದು, ಅವರ ನೆನಪಿನಿಂದ ನಾನು ನಿಮ್ಮ ಸನ್ಮಾನ ಮತ್ತು ಗೌರವ ಸ್ವೀಕರಿಸಿದ್ದೇನೆ. ಈ ರಾಜ್ಯಕ್ಕೆ ಮತ್ತು ಕೆ.ಆರ್.ನಗರಕ್ಕೆ ನಾಲ್ವಡಿ ಅವರ ಕೊಡುಗೆಗಳು ಅಪಾರವಾಗಿದ್ದು, ಸದಾ ಅವರ ಸ್ಮರಣೆ ಮಾಡಬೇಕಾಗಿದೆ ಎಂದರು.
ರಾಜ್ಯದ ಜನತೆಗೆ ಮೈಸೂರು ಅರಸ ಕೊಡುಗೆ ಬಗ್ಗೆ ನಾವು ಹೇಳುವುದು ಏನೂ ಇಲ್ಲ. ಅದೆಲ್ಲಾ ಜನ ಮಾನಸದಲ್ಲೇ ಉಳಿದಿದೆ. ಅವರು ಅಳವಡಿಸಿಕೊಂಡು ಬಂದ ತತ್ವ, ಸಿದ್ಧಾಂತಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ನಾಯಕ ಮತ್ತು ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡಿದ್ದ ನಮ್ಮ ನಾಲ್ವಡಿಯವರು ರಾಜ ಪ್ರಭುತ್ವದಲ್ಲಿಯೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡು ರಾಜಧರ್ಮ ಪಾಲಿಸಿದರು ಎಂದು ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಮಕ್ಕಳಿಲ್ಲದಿದ್ದರೂ ರಾಜ್ಯದ ಪ್ರತಿಯೊಬ್ಬ ಕುಟುಂಬವೂ ನನ್ನದೆಂದು ಸೌಹಾರ್ದತೆಯಿಂದ ಸಮಾಜಮುಖಿ ಕೆಲಸ ಮಾಡಿದರು. ಎಲ್ಲರೂ ರಾಜರಾಗಲು ಸಾಧ್ಯವಿಲ್ಲದಿದ್ದರೂ ಪ್ರತಿಯೊಬ್ಬರು ತಮ್ಮ ಜೀವನದ ಒಂದು ಹಂತದಲ್ಲಿ ನಾಯಕರಾಗಬಹುದಾಗಿದೆ. ಅರಮನೆಯ ದೃಷ್ಟಿಯಿಂದ ಹಾಗೂ ಸಂಸದನಾಗಿ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುವ ಮೂಲಕ ನಿಮ್ಮ ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಸಾ.ರಾ.ಧನುಷ್, ನಮ್ಮ ಕುಟುಂಬದ ಮೇಲೆ ಕ್ಷೇತ್ರದ ಜನರಿಗೆ ಅಪಾರ ಗೌರವ ಮತ್ತು ಪ್ರೀತಿ ಇದ್ದು, ಅದನ್ನು ನಿರಂತರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಕೆ.ಆರ್.ನಗರ ಮತು ಸಾಲಿಗ್ರಾಮ ತಾಲೂಕಿನಲ್ಲಿ ಕ್ಲಿನಿಕ್ ತೆರೆದು ವಾರದಲ್ಲಿ ಎರಡು ಬಾರಿ ಉಚಿತವಾಗಿ ಜನರಿಗೆ ಚಿಕಿತ್ಸೆ ನೀಡಲಿದ್ದೇನೆ ಎಂದು ಹೇಳಿದರಲ್ಲದೆ, ನಮ್ಮ ತಂದೆ ಸಾ.ರಾ.ಮಹೇಶ್ ಅವರು ರಾಜಕೀಯ ಕ್ಷೇತ್ರದಲ್ಲಿ ಇರುವವರೆಗೆ ನಮ್ಮ ಕುಟುಂಬದ ಯಾರೂ ಒಂದು ಸಣ್ಣ ಸ್ಥಾನವನ್ನು ಪಡೆಯಲು ಬಯಸುವುದಿಲ್ಲ ಎಂದು ವಾಗ್ಧಾನ ನೀಡಿದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಈ ಕ್ಷೇತ್ರ ನನಗೆ ಹಣ, ಆಸ್ತಿ, ಅಧಿಕಾರ ಎಲ್ಲವನ್ನೂ ನೀಡಿದ್ದು ನಾನು ಮಾಡಿರುವ ಸೇವೆ ನನಗೆ ತೃಪ್ತಿ ತಂದಿದೆ. ನನ್ನ ಜೀವಿತಾವಧಿಯಲ್ಲಿ ನಾನು ನನ್ನ ನಾಯಕರೆಂದು ಒಪ್ಪಿಕೊಳ್ಳುವುದು ಎಚ್.ಡಿ.ಕುಮಾರಸ್ವಾಮಿ ಅವರನ್ನು ಮಾತ್ರ. ನಾನು ಚುನಾವಣೆಗೆ ಸ್ಪರ್ಧಿಸುವುದು ಕೆ.ಆರ್.ನಗರದಲ್ಲಿ ಮಾತ್ರ. ಸೇವೆ ಮಾಡಲು ವೈದಕೀಯ ಕ್ಷೇತ್ರ ಬಹಳ ಪವಿತ್ರವಾಗಿದ್ದು, ನನ್ನ ಮಗ ವೈದಕೀಯ ಕ್ಷೇತ್ರದಲ್ಲಿಯೇ ಸೇವೆ ಮತ್ತು ಸಾಧನೆ ಮಾಡಲಿದ್ದು, ನಾನು ಬದುಕಿರುವವರೆಗೂ ನನ್ನ ಕಾರ್ಯಕರ್ತರು ನನ್ನ ಮಕ್ಕಳ ಮುಂದೆ ಕಷ್ಟ ಹೇಳಿಕೊಳ್ಳುವಂತಹ ಪರಿಸ್ಥಿತಿಗೆ ನಾನು ಬಿಡುವುದಿಲ್ಲ ಎಂದು ತಮ್ಮ ರಾಜಕೀಯ ಇಂಗಿತ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಮಾಜಿ ಸದಸ್ಯ ಎಂ.ಟಿ.ಕುಮಾರ್ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮುಡಾ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಮೂಳೆ ತಜ್ಞ ಡಾ.ಮಹಬೂಬ್‌ಖಾನ್, ಪುರಸಭಾ ಮಾಜಿ ಅಧ್ಯಕ್ಷ ಡಿ.ಕಾಂತರಾಜ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಜಿಲ್ಲಾ ಗ್ರಾಮಾಂತರ ಯುವ ಜೆಡಿಎಸ್ ಉಪಾಧ್ಯಕ್ಷ ಕಗ್ಗರೆ ಕುಚೇಲ ಮತ್ತಿತರರು ಹಾಜರಿದ್ದರು.