ನಾಲ್ಕೇ ವರ್ಷದಲ್ಲಿ ಬಿರುಕುಬಿಟ್ಟ ಅಂಗನವಾಡಿ ಕಟ್ಟಡ

12ss1angnavadi kattada
Published on

ಶನಿವಾರಸಂತೆ: ಸಮೀಪದ ನಿಡ್ತ ಗ್ರಾಮ ಪಂಚಾಯಿತಿಗೆ ಸೇರಿದ ಮಾದೇಗೋಡು ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡ ನಿರ್ಮಿಸಿ ನಾಲ್ಕು ವರ್ಷದಲ್ಲೇ ಗೋಡೆ ಬಿರುಕು ಬಿಟ್ಟಿದ್ದು ಛಾವಣಿಯ ಸಿಮೆಂಟ್ ಪ್ಲಾಸ್ಟರ್ ಉದುರಿ ಬೀಳುತ್ತಿದೆ.

ಕಟ್ಟಡ ಕಾಮಗಾರಿ ಕಳಪೆಯಾಗಿರುವುದರಿಂದ ಕೇವಲ 4 ವರ್ಷಕ್ಕೆ ಅಂಗನವಾಡಿ ಕಟ್ಟಡ ಶಿಥಿಲಗೊಂಡಿದೆ. 2021ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 13 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕಟ್ಟಡವನ್ನು ನಿರ್ಮಿಸಿದ್ದಾರೆ. ಆದರೆ ಕಳಪೆ ಗುಣಮಟ್ಟದಲ್ಲಿ ಕಟ್ಟಡ ಕಾಮಗಾರಿ ನಡೆದಿರುವುದರಿಂದ ಕಟ್ಟಡದ ಒಳಗಡೆಯ ಗೋಡೆಯಲ್ಲಿ ಬಿರುಕುಗೊಳುತ್ತಿದೆ.

ಮಳೆಗಾಲದಲ್ಲಿ ಕಟ್ಟಡದ ಗೋಡೆ ಮತ್ತು ಛಾವಣಿ ಸೀಲಿಂಗ್ ಸೋರುತ್ತದೆ. ಮೂರು ತಿಂಗಳ ಹಿಂದೆ ಕಟ್ಟಡದ ಛಾವಣಿಯಿಂದ ಸಿಮೆಂಟ್ ಪ್ಲಾಸ್ಟರ್ ಉದುರಿ ಬಿದ್ದಿದೆ. ಅದೃಷ್ಟವಶಾತ್ ರಾತ್ರಿ ವೇಳೆಯಲ್ಲಿ ಸಿಮೆಂಟ್ ಉದುರಿ ಬಿದ್ದಿದೆ.

ಪ್ರಸ್ತುತ ಸಾಲಿನಲ್ಲಿ ಅಂಗನವಾಡಿ ಕೇಂದ್ರದಲ್ಲಿ 13 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಒಬ್ಬರು ಶಿಕ್ಷಕಿ, ಒಬ್ಬರು ಸಹಾಯಕಿ, ಒಬ್ಬರು ಅಡುಗೆ ಸಿಬ್ಬಂದಿ ಸೇರಿದಂತೆ ಮೂವರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಳಪೆ ಕಾಮಗಾರಿ ನಡೆದಿರುವ ಕುರಿತು ಸಂಬಂಧಪಟ್ಟ ಗ್ರಾಪಂ ಸದಸ್ಯರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ಜನಪ್ರತಿನಿಧಿಗಳು ಆರೋಪಿಸಿದ್ದಾರೆ.

ಮೂರು ತಿಂಗಳ ಹಿಂದೆ ಕಟ್ಟಡದ ಒಳಭಾಗದ ಛಾವಣಿಯಿಂದ ಸಿಮೆಂಟ್ ಸೀಲಿಂಗ್ ಉದುರಿ ಬಿದ್ದಿದೆ. ರಾತ್ರಿ ಸಮಯದಲ್ಲಿ ಇದು ಬಿದ್ದಿದೆ ಹಗಲು ಸಮಯದಲ್ಲಾಗಿದ್ದರೆ ಅನಾಹುತವಾಗುತ್ತಿತ್ತು. ಈ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ದುರಸ್ತಿಗೊಳಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ.

ಮನು, ಸದಸ್ಯ, ನಿಡ್ತ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net