

ನಾಪೋಕ್ಲು: ಪೊನ್ನಂಪೇಟೆಯಿಂದ ಕಟ್ಟೆಮಾಡುವಿಗೆ ಬೈಕ್ ಜಾಥಾ ತೆರಳಲು ಮುಂದಾಗಿದ್ದ ಸಂಘಟಕರನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ನಾಲ್ಕುನಾಡು ಕೊಡವ ಜನಾಂಗದವರು ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ, ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಕಟ್ಟೆಮಾಡುವಿನ ಮೃತ್ಯುಂಜಯ ದೇವಾಲಯದಲ್ಲಿ ಕೊಡವ ಜನಾಂಗಕ್ಕೆ ಹಾಗೂ ಕೊಡವ ಸಂಪ್ರದಾಯದ ಉಡುಗೆ ತೊಡುಗೆಗೆ ಅವಮಾನ ಮಾಡಿದ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದವರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನೆ ಬಳಿಕ ನಾಪೋಕ್ಲು ಠಾಣೆಗೆ ತೆರಳಿ ಠಾಣಾಧಿಕಾರಿ ಮಂಜುನಾಥ್ ಅವರ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಕುಂಡಿಯೊಳಂದ ರಮೇಶ್ ಮುದ್ದಯ್ಯ, ಬಿದ್ದಾಟಂಡ ತಮ್ಮಯ್ಯ, ಕುಲ್ಲೆಟೀರ ಅರುಣ್ ಬೇಬ, ಕಲಿಯಂಡ ಮಿಲನ್ ಮಂದಣ್ಣ, ಶಿವಚಾಳಿಯಟಡ ಅಂಬಿ ಕಾರ್ಯಪ್ಪ ಭಾಗವಹಿಸಿದ್ದರು. ಪ್ರತಿಭಟನೆಯಿಂದ ಕೆಲಕಾಲ ವಾಹನ ದಟ್ಟಣೆ ಉಂಟಾಗಿತ್ತು. ನಂತರ ಪೊಲೀಸರು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.