ನಾಲ್ಕು ವರ್ಷಗಳಲ್ಲಿ 21 ಸಾವಿರ ಮತದಾರರು ಹೆಚ್ಚಳ

Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 5,91,101 ಪುರುಷ, 5,85,185 ಮಹಿಳೆ ಸೇರಿ ಒಟ್ಟು 11,76,268 ಮತದಾರರಿದ್ದಾರೆ ಎಂದು ಅಂತಿಮ ಪಟ್ಟಿಯನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಗುರುವಾರ ಪ್ರಕಟಿಸಿದ್ದಾರೆ. ಸದ್ಯದಲ್ಲೇ ವಿಧಾನಸಭಾ ಚುನಾವಣೆ ಪ್ರಕಟವಾಗುವುದರಿಂದ ಈ ಪಟ್ಟಿ ಹೆಚ್ಚು ಮಹತ್ವ ಪಡೆದಿದೆ.
ಕಳೆದ ನವೆಂಬರ್ 9 ರಂದು ಕರಡು ಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ 2023 ರ ಜನವರಿ 1 ನ್ನು ಅರ್ಹತಾ ದಿನವನ್ನಾಗಿಸಿಕೊಂಡು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಕರಡು ಪಟ್ಟಿ ಪ್ರಕಟಿಸಿದ ದಿನಾಂಕದಿಂದ ಇದುವರೆಗೆ 11,825 ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. 14,299 ಮತದಾರರನ್ನು ಸೇರಿಸಲಾಗಿದೆ. ಅಂದಿನಿಂದ ಇಂದಿನವರೆಗೆ ನಿವ್ವಳ ಮತದಾರರ ಸಂಖ್ಯೆಯಲ್ಲಿ 14,599 ಹೆಸರು ಹೆಚ್ಚಾಗಿ ಸೇರ್ಪಡೆಯಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಕಟಿಸಿದ ಮತದಾರರ ಪಟ್ಟಿಗೆ ಹೋಲಿಸಿದರೆ 21,158 ಮತದಾರರು ಹೆಚ್ಚಾಗಿದ್ದಾರೆ. 2019 ರಲ್ಲಿ 5,83,160 ಪುರುಷರು, 5,71,950 ಮಹಿಳೆಯರು ಸೇರಿ 11,55,110 ಮತದಾರರಿದ್ದರು.
ಗುರುವಾರ ಎಲ್ಲ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳ ಸಭೆ ಮಾಡಿ ಅವರಿಗೆ ಮತದಾರರ ಪಟ್ಟಿಯನ್ನು ಒದಗಿಸಲಾಗಿದೆ. ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರಿರುವ ಬಗ್ಗೆ ಚುನಾವಣಾ ಆಯೋಗದ ಸಿಇಒ ಕರ್ನಾಟಕ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ ಯಂತ್ರಗಳ ಪೂರೈಕೆ:
ಆಯೋಗವು ವೇಗದಿಂದ ವಿಧಾನಸಭಾ ಚುನಾವಣೆ ತಯಾರಿ ನಡೆಸಿದ್ದು, ಈಗಾಗಲೇ ಮತ ಯಂತ್ರಗಳನ್ನು ಪೂರೈಸಿದೆ. 2693 ಕಂಟ್ರೋಲ್ ಯುನಿಟ್, 1891 ಬ್ಯಾಲೆಟ್ ಯುನಿಟ್, ಹಾಗೂ 2043 ವಿವಿಪ್ಯಾಟ್‌ಗಳನ್ನು ಹೈದ್ರಾಬಾದ್‌ನ ಇಸಿಐಎಲ್ ಈಗಾಗಲೇ ಪೂರೈಕೆ ಮಾಡಿದ್ದು, ಇದೇ ವಾರ ತಜ್ಞರು ಯಂತ್ರಗಳನ್ನು ಪರಿಶೀಲನೆ ನಡೆಸುವರು.

ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ
ವಿಧಾನಸಭಾ ಕ್ಷೇತ್ರ ಪುರುಷ ಮಹಿಳೆ ಒಟ್ಟು ಮತದಾರರು
ಹಳಿಯಾಳ 89503 88008 1,77,511
ಕಾರವಾರ 1,06,746 1,09,392 2,16.138
ಕುಮಟಾ 92,899 92,901 1,85,800
ಭಟ್ಕಳ 1,11,740 1,08,136 2,19,876
ಶಿರಸಿ 99276 88,537 1,79,474
ಯಲ್ಲಾಪುರ 90,937 88,537 1,76,286

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net