ನಾಲ್ಕು ಕೊಲೆ ಮಾಡಿ ಪರಾರಿಯಾಗಿದ್ದವ ಶಿವಮೊಗ್ಗದಲ್ಲಿ ಅಂದರ್‌

26KWR-Vinay Bhat
Published on

ವಿಜಯವಾಣಿ ಸುದ್ದಿಜಾಲ ಭಟ್ಕಳ
ಒಂದೇ ಮನೆಯ ನಾಲ್ವರನ್ನು ಕೊಚ್ಚಿ ಕೊಲೆ ಮಾಡಿದ ಪ್ರಮುಖ ಆರೋಪಿ ಹಲ್ಯಾಣಿ ಗ್ರಾಮದ ವಿನಯ ಭಟ್‌ನ್ನು ಭಾನುವಾರ ಬಂಧಿಸುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ. ಈಗಾಗಲೇ ವಿದ್ಯಾಭಟ್ ಹಾಗೂ ಆಕೆಯ ತಂದೆ ಶ್ರೀಧರ ಭಟ್ ಎಂಬುವವರನ್ನು ಬಂಧಿಸಲಾಗಿದ್ದು, ಬಂದಿತರ ಸಂಖ್ಯ ಮೂರಕ್ಕೇರಿದೆ.
ಕೊಲೆ ಮಾಡಿದ ನಂತರ ಮನೆಗೆ ಬಂದು ಸ್ನಾನ ಮಾಡಿ ಬೈಕ್‌ನಲ್ಲಿ ಸಾಗರದತ್ತ ವಿನಯ ಭಟ್ ತೆರಳಿದ್ದ. ಸಾಗರದ ಕಾರ್ಗಲ್‌ನಲ್ಲಿ ಆತನ ಬೈಕ್ ಪತ್ತೆಯಾಗಿತ್ತು. ಪೊಲೀಸರು ಮೂರು ತಂಡ ರಚಿಸಿ ತನಿಖೆ ಕೈಗೊಂಡು ಶಿವಮೊಗ್ಗೆದಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿನ್ನೆಲೆ:
ಹಾಡುವಳ್ಳಿ ಸಮೀಪದ ಒಂಟಿ ಮನೆಯಲ್ಲಿ ಶುಕ್ರವಾರ ಸಾಯಂಕಾಲದ ಹೊತ್ತಿಗೆ ಶಂಭು ಭಟ್ (65), ಅವರ ಪತ್ನಿ ಮಾದೇವಿ ಭಟ್ ( 58), ಮಗ ರಾಘವೇಂದ್ರ ಭಟ್ (40) ಹಾಗೂ ಸೊಸೆ ಕುಸುಮಾ ಭಟ್ (32) ಅವರನ್ನು ಕೊಲೆ ಮಾಡಲಾಗಿತ್ತು. ಮನೆಯ ಆವರಣದಲ್ಲಿಯೇ ಹೆಣಗಳು ರಕ್ತದ ಮಡುವಿನಲ್ಲಿ ಉರುಳಿದ್ದವು. ರಾಘವೇಂದ್ರ ಹಾಗೂ ಕುಸುಮಾ ಅವರ ಇಬ್ಬರು ಮಕ್ಕಳು ಅನಾಥರಾಗಿದ್ದರು.
ಈ ಭೀಕರ ಕೃತ್ಯಕ್ಕೆ ಆಸ್ತಿ ಕಲಹವೇ ಕಾರಣವಾಗಿದೆ. ಮನೆಯ ಹಿರಿಯ ಸೊಸೆ ವಿದ್ಯಾ ಭಟ್(ಈ ಮೊದಲೇ ಮೃತಪಟ್ಟಿದ್ದ ಶಂಭು ಭಟ್ಟರ ಹಿರಿಯ ಮಗನ ಪತ್ನಿ) ಆಕೆಯ ತಂದೆ ಶ್ರೀಧರ ಭಟ್ ಹಾಗೂ ಸಹೋದರ ವಿನಯ ಭಟ್ ಕಾರಣ ಎಂದು ಕೊಲೆಯಾದ ಕುಟುಂಬದ ಪುತ್ರಿ ಜಯಾ ಪ್ರಕಾಶ ಅಡಿಗ ಭಟ್ಕಳ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು.
ಹಿರಿಯ ಸೊಸೆ ವಿದ್ಯಾ ಭಟ್ ಎಂಬಾಕೆಯನ್ನು ಮೊದಲ ದಿನವೇ ವಶಕ್ಕೆ ಪಡೆಯಲಾಗಿತ್ತು. ಆಕೆಯ ತಂದೆ ಶ್ರೀಧರ ಭಟ್ ಹಾಗೂ ಪ್ರಮುಖ ಆರೋಪಿ, ಸಹೋದರ ವಿನಯ ಭಟ್ ತಲೆಮರೆಸಿಕೊಂಡಿದ್ದರು. ಶ್ರೀಧರ ಭಟ್ ಮೊದಲೇ ಸಿಕ್ಕಿದ್ದು, ಭಾನುವಾರ ವಿನಯ ಭಟ್‌ನಲ್ಲಿ ವಶಕ್ಕೆ ಪಡೆದು, ಭಟ್ಕಳಕ್ಕೆ ಕರೆತಂದು ತನಿಖೆ ಕೈಗೊಂಡಿದ್ದು,ಶೀಘ್ರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
ಸಿಂಗಾರ ಕೊಯ್ದರು:
ಶಂಭು ಭಟ್ ಅವರಿಗೆ ಐದು ಮುಕ್ಕಾಲು ಎಕರೆ ಅಡಕೆ ತೋಟವಿತ್ತು. ಕೆಲ ತಿಂಗಳ ಹಿಂದೆ ಅವರ ಹಿರಿಯ ಮಗ ಶ್ರೀಧರ ಭಟ್ ಅನಾರೋಗ್ಯದಿಂದ ಮೃತಪಟ್ಟಿದ್ದರು. ತೋಟದಲ್ಲಿ ತಮಗೆ ಪಾಲು ನೀಡುವಂತೆ ಮೃತ ಶ್ರೀಧರ ಭಟ್ ಅವರ ಪತ್ನಿ ವಿದ್ಯಾ ಶಂಭು ಭಟ್ಟರ ಬಳಿ ಪಟ್ಟು ಹಿಡಿದಿದ್ದರು. ಸಾಕಷ್ಟು ಮಾತುಕತೆಯ ಬಳಿಕ ಆಕೆಯ ಪಾಲಿಗೆ 1 ಎಕರೆ 15 ಗುಂಟೆ ಜಮೀನನ್ನು ಬಿಟ್ಟುಕೊಡಲಾಗಿತ್ತು. ಆದರೆ, ಆಸ್ತಿ ಹಂಚಿಕೆ ಸರಿಯಾಗಿಲ್ಲ. ಇಬ್ಬರು ಹೆಣ್ಣು ಮಕ್ಕಳಿಗೆ ಆಸ್ತಿ ಹಂಚಬಾರದಿತ್ತು ಎಂದು ವಿದ್ಯಾ ಭಟ್ ಕ್ಯಾತೆ ತೆಗೆದಿದ್ದರು. ತವರು ಮನೆಯಲ್ಲಿದ್ದುಕೊಂಡು ತಂದೆ ಹಾಗೂ ಸಹೋದರನ ಸಹಕಾರದಿಂದ ತಮ್ಮ ತೋಟ ನೋಡಿಕೊಳ್ಳುತ್ತಿದ್ದರು. ಆದರೆ ವಿದ್ಯಾ ಭಟ್ ಹಾಗೂ ಶಂಭು ಭಟ್ಟರ ಕುಟುಂಬದ ನಡುವೆ ಹಲವು ಬಾರಿ ಇಂಥ ವಿಚಾರಗಳಿಗೆ ಗಲಾಟೆ ನಡೆದಿತ್ತು. ಕೆಲ ದಿನಗಳ ಹಿಂದೆ ಅಡಕೆ ಕೊನೆಯ ಜತೆ ಸಿಂಗಾರವನ್ನೂ ಕೊಯ್ಯಿಸಿದ ಬಗ್ಗೆಯೂ ಗಲಾಟೆಯಾಗಿತ್ತು. ಶುಕ್ರವಾರ ಮನೆಯ ಕೊಟ್ಟಿಗೆ ನಿರ್ಮಾಣಕ್ಕೆ ಕೆಂಪುಗಲ್ಲು ಬಳಕೆ ವಿಚಾರದಲ್ಲಿ ಗಲಾಟೆ ನಡೆದಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net