

ಹಾಸನ: ಹೊಳೆನರಸೀಪುರ ತಾಲೂಕು ಹಳೇಕೋಟೆ ಹೋಬಳಿ ಹರಳಹಳ್ಳಿ ಸಮೀಪದ ಹೇಮಾವತಿ ಎಡದಂಡೆ ನಾಲೆಯಲ್ಲಿ ಭಾನುವಾರ ಬೆಳಗ್ಗೆ ಕಾರೊಂದು ಪತ್ತೆಯಾಗಿದೆ.
ಹಾಸನ ತಾಲೂಕು ಕರಿಗೌಡನಕೊಪ್ಪಲು ಗ್ರಾಮದ ಪ್ರೇಮಕುಮಾರ್ (38) ಅವರಿಗೆ ಸೇರಿದ ಕಾರು ಎಂದು ತಿಳಿದು ಬಂದಿದೆ. ಪ್ರೇಮಕುಮಾರ್ ಆ.17ರಿಂದು ನಾಪತ್ತೆಯಾಗಿರುವುದಾಗಿ ತಂದೆ ತಿಮ್ಮೇಗೌಡ ಶನಿವಾರವಷ್ಟೇ ಶಾಂತಿಗ್ರಾಮ ಠಾಣೆಯಲ್ಲಿ ದೂರು ನೀಡಿದ್ದರು. ಭಾನುವಾರ ಇಡೀ ದಿನ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧಕಾರ್ಯ ನಡೆಸಿದರೂ ಪ್ರೇಮಕುಮಾರ್ ಪತ್ತೆಯಾಗಿಲ್ಲ.
ಭಾನುವಾರ ಬೆಳಗ್ಗೆ ಫೋನ್ ಮಾಡಿದಾಗ ರಿಂಗ್ ಆದರೂ ಕರೆ ಸ್ವೀಕರಿಸಲಿಲ್ಲ. ಆ ಬಳಿಕ ಮೊಬೈಲ್ ಸ್ವಿಚ್‌ಆಫ್ ಆಗಿದೆ. ಆತನ ಪತ್ನಿಯೂ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ದೊಡ್ಡಕುಂಚೇವು ಗ್ರಾಮದಲ್ಲಿ ಪೊಲೀಸರು ಸಂಜೆವರೆಗೆ ಶೋಧ ಕಾರ್ಯ ನಡೆಸಿದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.