ನಾಲೆಗೆ ಮೃತ ಕೋಳಿ ಎಸೆದವ ಪೌಲ್ಟ್ರಿಫಾರ್ಮ್ ನೌಕರ

Published on

ಶ್ರೀರಂಗಪಟ್ಟಣ: ತಾಲೂಕಿನ ದೇವರಾಯ ನಾಲೆಯ ನೀರಲ್ಲಿ ತೇಲಿಬಂದ ಮೃತ ಕೋಳಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಕ್ಕಿಜ್ವರದ ಭೀತಿ ಎದುರಾಗಿದ್ದ ಹಿನ್ನೆಲೆಯಲ್ಲಿ ಪರಿಶೀಲನೆಗೆ ಮುಂದಾಗಿದ್ದ ಪಶುಇಲಾಖೆ ಅಧಿಕಾರಿಗಳ ತಂಡ ಕೊನೆಗೂ ಘಟನೆಗೆ ಕಾರಣ ಪತ್ತೆ ಹಚ್ಚಿದ್ದಾರೆ.

ತಾಲೂಕಿನ ಪಿ.ಹೊಸಹಳ್ಳಿ ಗ್ರಾಮ ಸಮೀಪದ ಪೌಲ್ಟ್ರಿಫಾರ್ಮ್‌ವೊಂದರಲ್ಲಿ ಮೃತಪಟ್ಟ ಕೋಳಿಗಳನ್ನು ಒಂದೆಡೆ ಸಂಗ್ರಹಿಸಿದ್ದ ಫಾರ್ಮ್ ನೌಕರನೊಬ್ಬ ಅವುಗಳನ್ನು ಕ್ರಮಬದ್ಧವಾಗಿ ವಿಲೇವಾರಿ ಮಾಡದೆ, ಪೌಲ್ಟ್ರಿಫಾರ್ಮ್‌ನ ಮಾಲೀಕನ ಗಮನಕ್ಕೂ ತಾರದೆ ಪಕ್ಕದಲ್ಲೇ ಹರಿಯುತ್ತಿದ್ದ ನಾಲೆಗೆ ಎಸೆದಿದ್ದಾನೆ ಎನ್ನಲಾಗಿದೆ.

ಪ್ರಕರಣದ ಜಾಡು ಪತ್ತೆಹಚ್ಚಿ ಸಂಬಂಧಪಟ್ಟ ಪೌಲ್ಟ್ರಿಫಾರ್ಮ್‌ಗೆ ಪಶು ಇಲಾಖೆಯ ತಾಲೂಕು ಪಶುವೈದ್ಯಾಧಿಕಾರಿ ಸುರೇಶ್ ನೇತೃತ್ವದ ವೈದ್ಯರ ತಂಡ ಭೇಟಿ ನೀಡಿ ಮಾಲೀಕ ಹಾಗೂ ಸಿಬ್ಬಂದಿಗೆ ಮುಂದೆ ಈ ರೀತಿ ಸಂಭವಿಸಿದಲ್ಲಿ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ. ನಿಯಮ ಪಾಲಿಸುವಂತೆ ಎಚ್ಚರಿಕೆ ನೀಡಿದರು. ಕೋಳಿ ಮರಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣ ಇಲಾಖೆಗೆ ಮಾಹಿತಿ ನೀಡುವಂತೆ ತಾಕೀತು ಮಾಡಿದ್ದಾರೆ.

ಮೃತಪಟ್ಟಿದ್ದ ಕೋಳಿಗಳನ್ನು ಪಶುವೈದ್ಯಾಧಿಕಾರಿಗಳ ತಂಡ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಅವುಗಳು ಹಕ್ಕಿಜ್ವರದ ಕಾರಣದಿಂದ ಮೃತಪಟ್ಟಿಲ್ಲ ಎಂಬುದನ್ನು ಧೃಡೀಕರಣಗೊಂಡ ಬಳಿಕ ಮೇಲಧಿಕಾರಿಗಳಿಗೆ ಈ ಬಗ್ಗೆ ವರದಿ ನೀಡಿದ್ದಾರೆ ಎನ್ನಲಾಗಿದೆ.

ತಾಲೂಕಿನ ಪಿ.ಹೊಸಹಳ್ಳಿ ಹಾಗೂ ಪಾಲಹಳ್ಳಿ ಗ್ರಾಮಗಳ ಹೊರವಲಯದಲ್ಲಿ ಹರಿಯುವ ದೇವರಾಯ ನಾಲೆ ಸಂಪರ್ಕ ನಾಲೆಯ ನೀರಲ್ಲಿ ಮಂಗಳವಾರ ಕೋಳಿಗಳ ಕಳೇಬರ ಪತ್ತೆಯಾದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಜನರಲ್ಲಿ ಹಕ್ಕಿಜ್ವರ ಭೀತಿ ಉಂಟು ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net