ನಾಲೆಗೆ ನೀರು ಹರಿಸಿದರೂ ಭರ್ತಿಯಾಗದ ಕೆರೆಗಳು

26 krp 01
Published on


ಕೆ.ಆರ್.ಪೇಟೆ: ಹೇಮಾವತಿ ಎಡದಂಡೆ ನಾಲೆಯಿಂದ ತಾಲೂಕಿನ ವಿತರಣೆ ನಾಲೆಗೆ ನೀರು ಹರಿಯುತ್ತಿರುವುದನ್ನು ಶಾಸಕ ಎಚ್.ಟಿ.ಮಂಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


55ನೇ ವಿತರಣೆ ನಾಲಾ ವ್ಯಾಪ್ತಿಯಲ್ಲಿನ ಅಗ್ರಹಾರಬಾಚಹಳ್ಳಿ, ಹೊಸಹಳ್ಳಿ, ಸಿಂಧಘಟ್ಟ ಸೇರಿದಂತೆ ಹಲವು ಗ್ರಾಮಗಳ ಕೆರೆಕಟ್ಟೆಗಳಿಗೆ ಹೇಮಾವತಿ ಇಂಜಿನಿಯರ್‌ಗಳ ಜತೆಗೂಡಿ ಪರಿಶೀಲಿಸಿದರು. 9 ದಿನಗಳಿಂದ ನೀರನ್ನು ಹರಿಸುತ್ತಿದ್ದರೂ ಕೆರೆಕಟ್ಟೆಗಳು ನಿರೀಕ್ಷಿತ ಪ್ರಮಾಣದಲ್ಲಿ ಭರ್ತಿಆಗದಿರುವ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ವಿತರಣೆ ನಾಲೆಯೊಳಗೆ ಗಿಡಗಂಟಿಗಳನ್ನು ತೆರವು ಮಾಡದಿದ್ದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯದಿರುವುದು ಬೆಳಕಿಗೆ ಬಂತು. ಗಿಡಗಂಟಿಗಳ ತೆರವು ಕೆಲಸವನ್ನು ಏಕೆ ಮಾಡಿಲ್ಲ. ತಾಂತ್ರಿಕ ಕಾರಣ ಹೇಳಿದರೆ ಸಮಸ್ಯೆ ಬಗೆಹರಿಯುವುದಿಲ್ಲ. 35 ದಿನಗಳೊಳಗೆ ತಾಲೂಕಿನ ಎಲ್ಲ ಕೆರೆಕಟ್ಟೆಗಳನ್ನು ತುಂಬಿಸುವಂತೆ ತಾಕೀತು ಮಾಡಿದರು. ರೈತರ ಸಂಕಷ್ಟವನ್ನೂ ಸ್ವಲ್ಪ ಅರ್ಥ ಮಾಡಿಕೊಳ್ಳುವಂತೆ ಇಂಜಿನಿಯರ್‌ಗಳಿಗೆ ಕಿವಿಮಾತು ಹೇಳಿದರು.


ತಾಲೂಕಿನಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಭತ್ತ, ರಾಗಿಯಂತಹ ಬೆಳೆಗಳನ್ನೇ ಅವಲಂಬಿಸಿದ್ದ ರೈತ ಕುಟುಂಬಗಳು ಯಾವುದೇ ಬೆಳೆಗಳನ್ನು ಬೆಳೆಯಲಾಗದೆ ಹೈರಾಣಾಗಿದ್ದಾರೆ. ಇದನ್ನು ಅರಿತು ಕೆರೆಕಟ್ಟೆಗಳಿಗಾದರೂ ನೀರು ತುಂಬಿಸಿ ಕೊಳವೆ ಬಾವಿಗಳ ಅಂತರ್ಜಲ ಕುಸಿಯದಂತೆ ನೋಡಿಕೊಳ್ಳುವುದು ಹಾಗೂ ಕೆರೆಕಟ್ಟೆಗಳ ಹಿಂಭಾಗದ ರೈತರು ಸಂಗ್ರಹವಾಗುವ ನೀರಿನಲ್ಲಿ ಬೆಳೆಗಳನ್ನು ಬೆಳೆದು ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೀರು ಬಿಡಲಾಗುತ್ತಿದೆ. ಅರೆ ನೀರಾವರಿ ಪ್ರದೇಶವಾದ ನಮ್ಮ ತಾಲೂಕಿನಲ್ಲಿ ಮಳೆಯೂ ಇಲ್ಲ, ಕಾಲುವೆಯ ನೀರೂ ಇಲ್ಲ ಎಂದರೆ ರೈತರು ಏನು ಮಾಡಬೇಕು. ನೀರಾವರಿ ಇಲಾಖೆಯ ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಮೊದಲು ತಾಲೂಕಿನ ಜನತೆಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆೆ ಎಂದು ಸೂಚನೆ ನೀಡಿದರು.


ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಜಿಲ್ಲಾ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ನಾಗೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಿ.ವಿಶ್ವನಾಥ್, ಸಹಾಯಕ ಇಂಜಿನಿಯರ್‌ಗಳಾದ ರಾಘವೇಂದ್ರ, ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net