ನಾಲೆ ಮಡುವಿನಲ್ಲಿ ಮೊಸಳೆ ಪತ್ತೆ

25-05-25--krs1--a
Published on

ಕೆ.ಆರ್.ಸಾಗರ: ಚಿಕ್ಕಾಯರಹಳ್ಳಿ ಗ್ರಾಮದ ಬಳಿ ವಿ.ಸಿ. ನಾಲೆಯ ಮಡುವಿನಲ್ಲಿ ಭಾನುವಾರ ಬೆಳಗ್ಗೆ ರೈತರೊಬ್ಬರು ಹಸುಗಳಿಗೆ ನೀರು ಕುಡಿಸಲು ಹೋದಾಗ ಮೊಸಳೆಯೊಂದು ಕಂಡುಬಂದಿದೆ.

ಸತತ ಮಳೆಯಿಂದಾಗಿ ವಿ.ಸಿ.ನಾಲೆಯಲ್ಲಿ ನಾಲ್ಕೈದು ದಿನಗಳಿಂದ ನೀರು ನಿಲ್ಲಿಸಲಾಗಿದ್ದು, ನೀರು ಸಂಪೂರ್ಣ ಕಡಿಮೆಯಾಗಿದೆ. ನಾಲೆ ಮಡುವಿನಲ್ಲಿ ಸ್ವಲ್ಪ ನೀರಿದ್ದು ಇದರಲ್ಲಿ ಮೊಸಳೆ ಇದ್ದು, ಬಿಸಿಲು ಕಾಯಲು ಬೆಳಗ್ಗೆ ತೀರಕ್ಕೆ ಬಂದಿದ್ದ ಸಂದರ್ಭದಲ್ಲಿ ಕಂಡು ಬಂದಿದೆ. ನಂತರ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಕೆ.ಆರ್.ಸಾಗರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

ನಂತರ ನಾಲೆ ನೀರಿನಲ್ಲಿ ಕಂಡು ಬಂದ ಮೊಸಳೆ ಹೊರ ಬಾರದ ಕಾರಣ ಡಿಆರ್‌ಎಫ್‌ಒ ಧರ್ಮೇಂದ್ರ ನೇತೃತ್ವದಲ್ಲಿ ಕೂಬಿಂಗ್ ನಡೆಸಿದ್ದು ಮೊಸಳೆ ಸಿಗದ ಕಾರಣ, ಮೊಸಳೆ ಹಿಡಿಯಲು ಬೋನು ಇಡಲಾಗಿದೆ. ಪೂರ್ಣ ಹೊರಬಾರದ ಕಾರಣ ಮೊಸಳೆಯ ಪೂರ್ಣ ಚಹರೆ ಹೇಳಲು ಸಾಧ್ಯವಿಲ್ಲ. ಕೆ.ಆರ್.ಸಾಗರ ಅಣೆಕಟ್ಟೆಯಿಂದ ನೀರು ಹೊರ ಬಿಟ್ಟಾಗ ಬಂದಿರುವ ಸಾಧ್ಯತೆ ಇದೆ. ಈ ಭಾಗದಲ್ಲಿ ಮೊಸಳೆ ಇಲ್ಲ ಎಂದು ಎಂದು ಡಿಆರ್‌ಎಫ್‌ಒ ಧರ್ಮೇಂದ್ರ ತಿಳಿಸಿದರು.

ಪಾಂಡವಪುರ ಅರಣ್ಯ ಇಲಾಖೆ ಸಿಬ್ಬಂದಿ ಕುಮಾರ್ ಲಮಾಣಿ, ವಾಚರ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net