ನಾರಾಯಣಗುರುಗಳ ಬದುಕು, ಬೋಧನೆ ಇಂದಿಗೂ ಪ್ರಸ್ತುತ

08sunti03.
Published on

ಸುಂಟಿಕೊಪ್ಪ: ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಮತ್ತು ಬೋಧನೆ ಇಂದಿಗೂ ಪ್ರಸ್ತುತ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಬಣ್ಣಿಸಿದರು.

7ನೇ ಹೊಸಕೋಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀನಾರಾಯಣ ಗುರುಗಳ 171ನೇ ಜಯಂತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕೆಲವು ಸಂದರ್ಭಗಳಲ್ಲಿ ನಾರಾಯಣಗುರುಗಳ ಹೋರಾಟ ಗುರಿ ಸೇರಿದೆಯೇ ಎಂಬುದರ ಬಗ್ಗೆ ಆತ್ಮಾವಲೋಕನ ಅಗತ್ಯ ಎಂದು ಹೇಳಿದರು.

ಶಾಸಕರ ನಿಧಿಯಿಂದ ಗರಿಷ್ಠ 10 ಲಕ್ಷ ರೂ. ಅನುದಾನ ಒದಗಿಸುವ ಭರವಸೆ ನೀಡಿದರು. ರಾಜಕಾರಣಿಗಳು ತಮ್ಮ ಕಾರ್ಯಸಾಧನೆಗೆ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಾರೆ. ಅದಕ್ಕೆ ಬಲಿಯಾಗದಿರಿ, ಎಲ್ಲರೂ ಒಗ್ಗಟಾಗಿ ಹೋಗೋಣ ಎಂದರು.

ಕೊಡಗು ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಶಾಖೆಯು ಬೆಳೆದು ಬಂದ ಇತಿಹಾಸವನ್ನು ಮೆಲುಕು ಹಾಕಿದ ಅವರು, ಮುಂದಿನ ದಿನಗಳಲ್ಲಿ ಈ ಕ್ಷೇತ್ರವು ಪುಣ್ಯ ಕ್ಷೇತ್ರವಾಗಿ ಹೊರಹೊಮ್ಮಲೆಂದು ಹಾರೈಸಿದರು.

ಮಾಜಿ.ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, 171 ವರ್ಷಗಳ ಹಿಂದೆಯೇ ಮುನ್ನುಡಿಯನ್ನು ನಾವೆಲ್ಲರೂ ಒಂದೇ ಎಂದು ಹೇಳಿದ ಮಹಾನುಭಾವ ಶ್ರೀನಾರಾಯಣ ಗುರು ಎಂದು ಬಣ್ಣಿಸಿದರು. ಸರ್ಕಾರದ ವತಿಯಿಂದ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಐದು ಲಕ್ಷ ರೂ. ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

7ನೇ ಹೊಸಕೋಟೆ ವ್ಯಾಪ್ತಿಯಲ್ಲಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಅನಾಥಾಶ್ರಮ ನಿರ್ಮಿಸುತ್ತಿದ್ದು ಆಶ್ರಯ ಕೋರಿ ಬರುವ ಎಲ್ಲರಿಗೂ ಅವಕಾಶ ಕಲ್ಲಿಸುವುದಾಗಿ ಅವರು ತಿಳಿಸಿದರು. ಕೇರಳದ ಶ್ರೀಪ್ರೇಮಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾಜಸೇವಕ ಎನ್.ವಿ.ಪದ್ಮನಾಭ ಮಾತನಾಡಿದರು.

7ನೇ ಹೊಸಕೋಟೆಯ ನೂರುಲ್ ಮಸೀದಿ ಖತೀಬ್ ಆಶ್ರಫ್ ಸಖಾಫಿ, 7ನೇ ಹೊಸಕೋಟೆ ಗ್ರಾಪಂ ಅಧ್ಯಕ್ಷ ಇ.ಬಿ.ಜೋಸೆಫ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್, ಶ್ರೀಮಹಾಗಣಪತಿ, ಗೋಪಾಲಕೃಷ್ಣ ದೇವಸ್ಥಾನ ಸಮಿತಿ ದಾಸಂಡ ರಮೇಶ್ ಚಂಗಪ್ಪ, ವಿ.ಎನ್.ಪದ್ಮನಾಭ, ಎಸ್‌ಎನ್‌ಡಿಪಿ ಮಹಿಳಾ ವಿಭಾಗದ ಅಧ್ಯಕ್ಷೆ ವಿಲಾಸಿನಿ ಶೇಖರ್, ಕಾರ್ಯದರ್ಶಿ ನಿರ್ಮಲಾ ಪ್ರಕಾಶ್, ಯುವ ವಿಭಾಗದ ಅಧ್ಯಕ್ಷ ಕೆ.ಎಂ.ರಮೇಶ್, ಕಾರ್ಯದರ್ಶಿ ಕೆ.ಎಚ್.ಸುಜಿತ್ ಮತ್ತಿತರರು ಹಾಜರಿದ್ದರು.

ದಾನಿಗಳಿಗೆ ಹಾಗೂ ಸಾಧಕಿ ಬಿಎಸ್‌ಎಫ್‌ನಲ್ಲಿ ಉಪನಿರೀಕ್ಷಕರಾಗಿ ನೇಮಕಗೊಂಡಿರುವ 7ನೇ ಹೊಸಕೋಟೆಯ ನಿವಾಸಿ ಕುಮಾರಿ ವಿಸ್ಮಯದಾಸ್ ಅವರನ್ನು ಸನ್ಮಾನಿಸಲಾಯಿತು.

ದಿನವಿಡೀ ವಿವಿಧ ಕಾರ್ಯಕ್ರಮ: ಶ್ರೀನಾರಾಯಣ ಗುರುಗಳ 171ನೇ ಜಯಂತಿಯನ್ನು 7ನೇ ಹೊಸಕೋಟೆಯಲ್ಲಿ ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಯಿತು.

ಭಾನುವಾರದಂದು 7ನೇ ಹೊಸಕೋಟೆಯ ಬ್ರಹ್ಮಶ್ರೀ ನಾರಾಯಣಗುರು ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ಟ್ರಸ್ಟ್, ಎಸ್‌ಎನ್‌ಡಿಪಿ ಶಾಖೆಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು ವನಿತಾ ಸಮಿತಿ ಮತ್ತು ಯೂತ್ ಕಮಿಟಿ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸೌಮ್ಯಾ ಪೂಕಳಂ ಸ್ಪರ್ಧೆಯನ್ನು ಉದ್ಘಾಟಿಸಿದರು.

7ನೇ ಹೊಸಕೋಟೆಯ ಎಸ್‌ಎನ್‌ಡಿಪಿ ಶಾಖ ಅಧ್ಯಕ್ಷ ಸಿ.ಬಿ.ರಾಜೇಶ್ ಧ್ವಜಾರೋಹಣ ನೆರವೇರಿಸಿದರು. ಗುರು ಪೂಜೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ಕೆ.ಸಾಯಿಕುಮಾರ್ ನೆರವೇರಿಸಿದರು.

ಶ್ರೀನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆಯನ್ನು ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ.ಮಂಜು ಉದ್ಘಾಟಿಸಿದರು.

ನಂತರ ನಾರಾಯಣ ಗುರುಗಳ ಭಾವಚಿತ್ರದೊಂದಿಗೆ ಭವ್ಯ ಮಂಟಪದಲ್ಲಿ ಇರಿಸಿ ಕೇರಳದ ಚಂಡೆ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಪೂಕಳಂ ಸ್ಪರ್ಧೆ, ಭಜನಾ ಕಾರ್ಯಕ್ರಮ, ಹಾಡುಗಾರಿಕೆ, ನೃತ್ಯ ಕಾರ್ಯಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net