

ಸಿದ್ದಾಪುರ: ಶಾಂತಿ ಸಹಬಾಳ್ವೆ ಸಹೋದರತ್ವ ಸಾರಿದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಮೈಗೂಡಿಸಿ ಕೊಂಡರೆ ಸಮಾಜ ಸುಧಾರಣೆ ಮೂಲಕ ಮುನ್ನಡೆಯಲು ಸಾಧ್ಯ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.
ಸಿದ್ದಾಪುರದ ಸ್ವರ್ಣ ಮಾಲಾ ಸಭಾಂಗಣದಲ್ಲಿ ಶ್ರೀ ನಾರಾಯಣ ಗುರು ಪರಿಪಾಲನಾ ಯೋಗಂ ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ ನಡೆದ ಬ್ರಹ್ಮ ಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
19ನೇ ಶತಮಾನದಲ್ಲಿ ನಾರಾಯಣ ಗುರುಗಳು ಪ್ರತಿಪಾದನೆ ಮಾಡಿದ ತತ್ವ ಸಿದ್ಧಾಂತ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎಸ್‌ಎನ್‌ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಎಸ್‌ಎನ್‌ಡಿಪಿ ಸಂಘಟನೆ ವಿವಿಧ ಜಿಲ್ಲೆಗಳಲ್ಲಿ ನೂರಾರು ಶಾಖೆಗಳನ್ನು ಹೊಂದಿದ್ದು, ಸಮಾಜದ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದರು.
ನಿವೃತ್ತ ಯೋಧರು ಹಾಗೂ ಐವತ್ತು ವರ್ಷ ದಾಂಪತ್ಯ ಜೀವನ ಪೂರೈಸಿದವರನ್ನು ಹಾಗೂ ಶಿಕ್ಷಣ ಕ್ಷೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕೊಡಗು ಮಲಯಾಳಿ ಸಂಘದ ಅಧ್ಯಕ್ಷ ವಿ.ಎಂ.ವಿಜಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ಉಪಾಧ್ಯಕ್ಷ ರಾಜನ್, ಟಿ.ಆರ್. ಸೋಮನಾಥ್, ಟಿ.ಎಸ್. ಸಜೀವ, ರವಿ, ಪಾಪಯ್ಯ ಆಚರಣಾ ಸಮಿತಿ ಅಧ್ಯಕ್ಷ ಆರ್ ಗಿರೀಶ್, ಕಾರ್ಯದರ್ಶಿ ರೀಶಾ ಸುರೇಂದ್ರ ಇತರರು ಇದ್ದರು.
ಗಮನಸೆಳೆದ ಮೆರವಣಿಗೆ: ಜಯಂತಿ ಅಂಗವಾಗಿ ಇಡೀ ಗ್ರಾಮವೇ ನಾರಾಯಣ ಗುರುಗಳ ಸಂದೇಶ ಸಾರುವ ಧ್ವಜಗಳೊಂದಿಗೆ ಶೃಂಗಾರಗೊಂಡಿತ್ತು.
ಮಹಿಳೆಯರು ಕಳಸ ಹಿಡಿದು, ಚಂಡೆ ವಾದ್ಯಗಳೊಂದಿಗೆ ಶ್ರೀ ನಾರಾಯಣ ಗುರುಮೂರ್ತಿಯನ್ನು ಅಲಂಕೃತ ಮಂಟಪದೊದಿಗೆ
ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಭಾಂಗಣಕ್ಕೆ ತಂದರು. ಕೇರಳದ ಸೂರ್ಯ ಕಮ್ಯೂನಿಕೇಷನ್ ತಂಡ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದವರ ಗಮನ ಸೆಳೆಯಿತು.