ನಾಯಿಗಳಿಗೂ ಕರೊನಾ ಬಿಸಿ

8sdp1
Published on

ಸಿದ್ದಾಪುರ: ಕರೊನಾ ವೈರಸ್ ಮಹಾಮಾರಿ ಜನತೆಗೆ ಮಾತ್ರ ಅಲ್ಲ ಬಿಡಾಡಿ ನಾಯಿಗಳಿಗೂ ಬಿಸಿ ಮುಟ್ಟಿಸುತ್ತಿದೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಅಂಗನವಾಡಿ, ಶಾಲೆ, ದೇವಸ್ಥಾನ, ಮಠ, ಮಂದಿರ, ಚಿಕನ್, ಮಟನ್, ಹೋಟೆಲ್ ಮತ್ತಿತರ ಕಡೆಗಳಲ್ಲಿ ಬೀಸಾಡುತ್ತಿದ್ದ ತಿಂಡಿ-ತಿನಿಸುಗಳನ್ನು ತಿಂದು ಗುಂಪು ಗುಂಪುಗಾಗಿ ಎಲ್ಲೆಂದರೆಲ್ಲಿ ಓಡಾಡಿಕೊಂಡು ರಸ್ತೆಯ ಮೇಲೆಯೇ ಜೀವನ ನಡೆಸುತ್ತಿದ್ದ ನಾಯಿಗಳ ಹೊಟ್ಟೆಗೆ ಈಗ ಎಲ್ಲಿಯೂ ಏನೂ ಸಿಗದಂತಾಗಿ ಹಸಿವಿನಿಂದ ಬಳಲುತ್ತಿವೆ.

ರಸ್ತೆ, ಬಸ್ ನಿಲ್ದಾಣ, ಶಾಲಾ ಆವರಣ ಮತ್ತಿತರ ಕಡೆಗಳಲ್ಲಿ ದಿನಕಳೆಯುತ್ತಿದ್ದ ನಾಯಿಗಳ ಹಿಂಡು ಈಗ ಮನೆಯ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿವೆ. ಅಲ್ಲಿಯೇ ಅವುಗಳ ಕೂಗಾಟ-ಚೀರಾಟ. ಹಸಿವಿನಿಂದ ಯಾವ ಸಮಯದಲ್ಲಿ ಮೈ ಮೇಲೆ ಎರಗುತ್ತವೆಯೋ ಎನ್ನುವ ಆತಂಕ ಜನರಲ್ಲಿ ಉಂಟಾಗಿದೆ. ಯಾರಾದರೂ ರಸ್ತೆಯ ಮೇಲೆ ಓಡಾಡುತ್ತಿದ್ದರೆ ಅವರನ್ನೆ ಹಿಂಬಾಲಿಸಿ ಅವರ ಕೈಯಲ್ಲಿರುವ ಚೀಲಗಳಿಗೂ ಸಂಚಕಾರ ಉಂಟು ಮಾಡಲಾರಂಭಿಸಿದೆ.

ಕರೊನಾ ವೈರಸ್​ನ ಲಾಕ್ ಡೌನ್ ಎನ್ನುವುದು ಬಿಡಾಡಿ ನಾಯಿಗಳು ಹಸಿವಿನಿಂದ ದಿನವಿಡೀ ಅಲ್ಲಲ್ಲಿ ಬಳಲುತ್ತ ಓಡಾಡುತ್ತಿರುವುದು ಕಂಡು ಬರುತ್ತಿದ್ದು ಹೀಗೆ ಮುಂದುವರೆದರೆ ಯಾವುದೇ ಸಂದರ್ಭದಲ್ಲಿ ಜನರ ಮೇಲೆ ಎರಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net