

ಅರಕಲಗೂಡು: ವಿದ್ಯೆ ಎಂಬುದು ಯಾರೊಬ್ಬರ ಸ್ವತ್ತಲ್ಲ, ಮನಸ್ಸು ಮಾಡಿದರೆ ಯಾರೂ ಬೇಕಾದರೂ ಉನ್ನತ ಸಾಧನೆ ಮಾಡುವ ಅವಕಾಶ ಇಂದಿನ ವಿದ್ಯಾರ್ಥಿಗಳಿಗೆ ದೊರೆತಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ 2022-23ನೇ ಸಾಲಿನ ಸಾಂಸ್ಕೃತಿಕ ವೇದಿಕೆ, ಕ್ರೀಡಾ ಚಟುವಟಿಕೆ, ಎನ್ನೆಸ್ಸೆಸ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಬಹಳ ತೀಕ್ಷ್ಣವಾಗಿದೆ. ರೆಡ್‌ಕ್ರಾಸ್, ಎನ್ನೆಸ್ಸೆಸ್‌ನಂತಹ ಚಟುವಟಿಕೆಗಳು ಸೇವಾ ಮನೋಭಾವನೆ, ನಾಯಕತ್ವದ ಗುಣಗಳನ್ನು ಮೂಡಿಸಲು ಸಹಕಾರಿಯಾಗಿದೆ. ಓದಿನ ಜತೆಗೆ ಕ್ರೀಡೆಯೂ ಮುಖ್ಯವಾಗಿದೆ. ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾದದ್ದು. ಇಲ್ಲಿ ಸರಿಯಾದ ರೀತಿಯಲ್ಲಿ ಮುನ್ನಡೆದಾಗ ಭವಿಷ್ಯದ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ದೇಶಕ್ಕಾಗಿ ದುಡಿದ ಮಹಾತ್ಮರ ಚರಿತ್ರೆಯನ್ನು ಓದುವ ಮೂಲಕ ಅವರನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆದಾಗ ಸಮಾಜ ಹಾಗೂ ಹೆತ್ತವರಿಗೆ ಕೀರ್ತಿ ತರಲು ಸಾಧ್ಯವಾಗುತ್ತದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎ.ಆರ್.ಬಾಲಾಜಿ, ಕಾಲೇಜಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಇದನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಮಾಡಿದರು. ಪ್ರಾಂಶುಪಾಲೆ ಡಿ.ಕೆ.ತಾರಾದೇವಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ನಿರಂಜನ್, ಎಚ್.ಸಿ.ವೆಂಕಟೇಶ್, ನರಸೇಗೌಡ, ಸಾಕೀಬ್, ರವಿಕುಮಾರ್, ಚಿದಂಬರ ಬಾಬು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.