

ಬೇಲೂರು: ರಾಜ್ಯದ ಎಲ್ಲ ಅಂಗಡಿ ಹಾಗೂ ಉದ್ಯಮಗಳ ನಾಮಫಲಕಗಳಲ್ಲಿ ಶೇ.60 ಕನ್ನಡ ಇರಬೇಕು ಎಂದು ಸರ್ಕಾರ ಆದೇಶಿದ್ದರೂ ಇನ್ನೂ ಅನುಷ್ಠಾನವಾಗಿಲ್ಲ ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಹೇಳಿದರು.
ಪಟ್ಟಣದ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ನಾಮಫಲಕಗಳು ಶೇ.60 ಕನ್ನಡ ಅಕ್ಷರ ಹೊಂದಿರಬೇಕು ಎಂದು ಸುತ್ತೋಲೆ ಹೊರಡಿಸಿದೆ. ಆದರೆ, ಆದೇಶ ಇನ್ನೂ ಕಾರ್ಯಗತವಾಗಿಲ್ಲ. ಈಗಾಗಲೇ ನಾವು ಜಿಲ್ಲಾಧಿಕಾರಿ ಭೇಟಿ ಮಾಡಿ ಮನವರಿಕೆ ಮಾಡಿದ್ದೇವೆ. ಎಲ್ಲ ತಾಲೂಕಿನ ಅಧ್ಯಕ್ಷರು ಈ ಬಗ್ಗೆ ಕಾರ್ಯ ಪ್ರವೃತ್ತರಾಗಬೇಕು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಹುಟ್ಟು ಹಾಕಿದ ಕಸಾಪಗೆ 108 ವರ್ಷ ತುಂಬಿದ್ದು ನಾಡಿನ ಪ್ರತಿಯೊಬ್ಬರೂ ಸದಸ್ಯರಾಗಬೇಕಿದೆ. ಹೊಸ ಸಾಹಿತಿಗಳನ್ನು ಗರುತಿಸಿ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಯುವಕರಲ್ಲಿ ಕನ್ನಡಾಭಿಮಾನ ಮೂಡಿಸಿ ಅವರನ್ನು ತೊಡಗಿಸಿಕೊಳ್ಳಬೇಕು. ಹಿಂದಿನ ಅಧ್ಯಕ್ಷರಾಗಿದ್ದ ರಾಜೇಗೌಡರು ತಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ನೂತನ ಅಧ್ಯಕ್ಷ ಮಾ.ನ.ಮಂಜೇಗೌಡರು ಇನ್ನಷ್ಟು ಉತ್ತಮ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಮಾಜಿ ಅಧ್ಯಕ್ಷ ಎಚ್.ಎಂ.ದಯಾನಂದ್ ಮಾತನಾಡಿ, ಸಾಹಿತ್ಯ ಪರಿಷತ್ತು ನಾಡು-ನುಡಿ, ನೆಲ-ಜಲದ ವಿಚಾರವಾಗಿ ಕೆಲಸ ಮಾಡುತ್ತಿದೆ. ಕಸಾಪ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಕೆಲಸ ಮಾಡಬೇಕಿದೆ. ರಾಜೇಗೌಡರು ಇಡೀ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ಒಪ್ಪಂದದಂತೆ ಅಧ್ಯಕ್ಷ ಸ್ಥಾನ ಬದಲಾವಣೆಯಾಗಿದೆ. ನೂತನ ಅಧ್ಯಕ್ಷರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ನೂತನ ಅಧ್ಯಕ್ಷ ಮಾ.ನ.ಮಂಜೇಗೌಡ ಮಾತನಾಡಿ, ತಾಲೂಕು ಕಸಾಪ ನಾಲ್ಕು ದಶಕಗಳಿಂದ ತಾಲೂಕಿನಲ್ಲಿ ಸಕ್ರಿಯವಾಗಿ ಚಟುವಟಿಕೆಗಳನ್ನು ನಡೆಸುತ್ತಿದೆ. ಪರಿಷತ್ತಿನ ಕೆಲಸಗಳನ್ನು ಶಾಲಾ ಕಾಲೇಜು, ಹೋಬಳಿ, ಗ್ರಾಮ ಮಟ್ಟದಲ್ಲಿ ಕಟ್ಟುವ ಅಭಿಲಾಷೆ ಇದೆ. ಕನ್ನಡಪರ ಸಂಘಟನೆಗಳೊಂದಿಗೆ, ಹಿರಿಯರ ಮಾರ್ಗದರ್ಶನದಲ್ಲಿ ಹೊಸ ಸಾಹಿತಿಗಳನ್ನು ಗುರುತಿಸುವ ಕೆಲಸಕ್ಕೆ ಮುಂದಾಗಲಿದ್ದೇವೆ ಎಂದರು.
ಸಾಹಿತಿ ಇಂದಿರಮ್ಮ, ಕಸಾಪ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ಗೌರವ ಕಾರ್ಯದರ್ಶಿಗಳಾದ ಬಿ.ಬಿ.ಶಿವರಾಜ್, ಆರ್.ಎಸ್.ಮಹೇಶ್, ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಪದಾಧಿಕಾರಿಗಳಾದ ಸಂಪತ್, ನಾಗರಾಜ್, ಪತ್ರಕರ್ತರ ಸಂಘದ ಅಧ್ಯಕ್ಷೆ ವೈ.ಆರ್.ಭಾರತೀಗೌಡ ಇದ್ದರು.