ನಾಡು ಶ್ರೀಭಗವತಿ ದೇವಾಲಯ ನವೀಕರಣಕ್ಕೆ ಸಿದ್ಧತೆ

13,npk..1
Published on

ನಾಪೋಕ್ಲು: ಇಲ್ಲಿನ ನಾಡು ಶ್ರೀಭಗವತಿ ದೇವಾಲಯದ ನವೀಕರಣಕ್ಕೆ ದೇವಾಲಯದ ಆಡಳಿತ ಮಂಡಳಿ ಮುಂದಾಗಿದೆ.

ಎರಡು ವರ್ಷಗಳ ಹಿಂದೆ ತಾಂಬೂಲ ಪ್ರಶ್ನೆಯಿಟ್ಟ ಸಂದರ್ಭದಲ್ಲಿ ಪೌಳಿಯ ಸುತ್ತ ಶಿಥಿಲಗೊಂಡಿರುವುದು ತಿಳಿದುಬಂದಿತು. ಅಲ್ಲದೆ ಮಹಾ ಗಣಪತಿ ಗುಡಿಯನ್ನು ನವೀಕರಿಸಬೇಕೆಂದು ಸೂಚಿಸಲಾಗಿತ್ತು. ಈಗಿರುವ ಪೌಳಿಯನ್ನು ತೆಗೆದು ಶಿಲಾಕಲ್ಲಿನಲ್ಲಿ ನಿರ್ಮಿಸಿ ಛಾವಣಿಗೆ ತಾಮ್ರದ ಹೊದಿಕೆ ಹಾಸಿ ಹೊಸದಾಗಿ ನಿರ್ಮಿಸುವಂತೆ ತೀರ್ಮಾನಿಸಲಾಗಿದ್ದು ಇದಕ್ಕೆ ಅಂದಾಜು 1.60 ಕೋಟಿ ರೂಪಾಯಿಗಳ ಅವಶ್ಯಕತೆ ಇದೆ.

ನಾಡು ಶ್ರೀಭಗವತಿ ದೇವಾಲಯ ಸುಮಾರು ಸಾವಿರ ವರ್ಷಗಳಿಗಿಂತಲೂ ಹಿಂದಿನ ಇತಿಹಾಸವನ್ನು ಹೊಂದಿದ್ದು ಆ ಕಾಲದಲ್ಲಿ ರಾಜವಂಶಸ್ಥರು ಹಾಗೂ ಊರಿನ ಪೂರ್ವಿಕರು ಅಷ್ಟ ಬಂದ ಬ್ರಹ್ಮ ಕಳಸ ಮಾಡಿ ದೇವಾಲಯವನ್ನು ಸ್ಥಾಪನೆ ಮಾಡಿದರು. ಭಕ್ತರ ನೆರವಿನೊಂದಿಗೆ ದೇವಾಲಯ ಅಭಿವೃದ್ಧಿ ಪಥದಲ್ಲಿ ಸಾಗಿತ್ತು. ದೇವಾಲಯದ ಅಂಗಳಕ್ಕೆ ಚಪ್ಪಡಿ ಹಾಸಿದ್ದು ಹೊರಾಂಗಣಕ್ಕೆ ಕಾಂಕ್ರೀಟ್ ಅಂಗಳ ಮತ್ತು ತಡೆಗೋಡೆ ನಿರ್ಮಾಣ ದೇವಾಲಯದ ಬಲಭಾಗದಲ್ಲಿ ಸಮುದಾಯ ಭವನ, ಎಡ ಭಾಗದಲ್ಲಿ ಊಟದ ಭವನವನ್ನು ಕಾಂಕ್ರೀಟ್ ಛಾವಣಿಯೊಂದಿಗೆ ಕಟ್ಟಲಾಗಿದೆ. ಸುಸಜ್ಜಿತ ಅಡುಗೆ ಕೋಣೆ, ಅರ್ಚಕರ ವಸತಿ ನಿಲಯ ನಿರ್ಮಿಸಲಾಗಿದೆ.

ಸರ್ಕಾರದ ಅನುದಾನದಿಂದ ದೇವಾಲಯದ ಕೆರೆ ಹಾಗೂ ರಸ್ತೆಗಳಿಗೆ ಕಾಂಕ್ರೀಟ್, ಇಂಟರ್ಲಾಕ್‌ನೊಂದಿಗೆ ಹೊರಾಂಗಣವನ್ನು ಸಹ ಅಭಿವೃದ್ಧಿಪಡಿಸಲಾಗಿದೆ. 2015ರಲ್ಲಿ ಶಿಲೆಯನ್ನು ಬಳಸಿ ಗರ್ಭಗುಡಿ, ತೀರ್ಥ ಮಂಟಪಕ್ಕೆ ತಾಮ್ರದ ಹೊದಿಕೆ ಹಾಸಿ, ಕಾಳೆಘಟ್ಟನ ತಂತ್ರಿಯವರ ನೇತೃತ್ವದಲ್ಲಿ ಮರು ಪ್ರತಿಷ್ಠಾಪಿಸಲಾಯಿತು.

ಇದೀಗ ಪೌಳಿಯನ್ನು ಶಿಲಾಕಲ್ಲಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಛಾವಣಿಗೆ ತಾಮ್ರದ ಹೊದಿಕೆ ಹಾಸಲು ನಿರ್ಧರಿಸಲಾಗಿದೆ. ದೇವಾಲಯದ ನವೀಕರಣಕ್ಕೆ ಭಕ್ತರು ಕೈಜೋಡಿಸುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net