ನಾಡು ಕಂಡ ಅಪ್ರತಿಮ ನಾಯಕ

Godutai -1
Published on

ಕಲಬುರಗಿ: ರಾಜಕೀಯ ಮುತ್ಸದ್ದಿ, ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ನಾಡು ಕಂಡ ಅಪ್ರತಿಮ ನಾಯಕರಾಗಿದ್ದರು ಎಂದು ಹಿರಿಯ ಚಿಂತಕ ಪ್ರೊ.ಆರ್.ಕೆ. ಹುಡಗಿ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ನಡೆದ ದೇವರಾಜ ಅರಸು ೧೦೮ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಏಳಿಗೆಗೆ ನೇರ ಮತ್ತು ನಿರಂತರ ಜನಪರ ಕೆಲಸ ಮಾಡಿದ್ದರು. ಬಡವರು, ಹಿಂದುಳಿದ ವರ್ಗ, ಶೋಷಿತರ ಹಿತಕ್ಕಾಗಿ ಹಗಲಿರುಳು ಶ್ರಮಿಸಿದರು. ಉತ್ತಮ ರಾಜಕೀಯ ಪ್ರಜ್ಞೆ, ಉತ್ತಮ ಆಡಳಿತ ಹಾಗೂ ದೂರದೃಷ್ಟಿಯೊಂದಿಗೆ ಭೂಸುಧಾರಣೆ, ಸಂಪನ್ಮೂಲ ಸಮಾನ ಹಂಚಿಕೆ, ಹಿಂದುಳಿದ ವರ್ಗ ಮತ್ತು ಅಂಚಿನಲ್ಲಿರುವ ಸಮುದಾಯಗಳ ಸಬಲಿಕರಣಕ್ಕಾಗಿ ದುಡಿದರು ಎಂದರು.
ವಿಶೇಷವಾಗಿ ಗ್ರಾಮೀಣ ಪ್ರದೇಶದ ಹಿಂದುಳಿದವರಿಗೆ ಕೈಗೆಟಕುವ ಮತ್ತು ಗುಣಮಟ್ಟದ ಶಿಕ್ಷಣ ಒದಗಿಸಿದರು. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲವಾಗಲೆಂದು ಪ್ರಪ್ರಥಮ ವಸತಿ ನಿಲಯ ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಅನುಕೂಲವಾಗಲೆಂದು ವಿದ್ಯಾರ್ಥಿ ವೇತನ ನೀಡಲು ಆರಂಭಿಸಿದರು ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವ್ಹಿ.ಶಿವಾನಂದನ್ ಮಾತನಾಡಿ, ದೇವರಾಜ ಅರಸ್ ದೂರದೃಷ್ಟಿ ನಾಯಕರಾಗಿದ್ದರು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕಾಗಿ ಹೋರಾಡಿದರು. ಬಡವರ, ದೀನ ದಲಿತರ ಧ್ವನಿಯಾಗಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ್ ಮಾತನಾಡಿ, ದೇವರಾಜ ಅರಸ್ ಅವರು ಸಮಾಜದಲ್ಲಿ ತುಳಿತಕ್ಕೊಳಗಾದವರ ಪರ ನಿಂತು, ನ್ಯಾಯ ಒದಗಿಸಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಅರಸು ಜೀವನ ಮತ್ತು ಸಾಧನೆ ಇಂದಿನ ಯುವ ಪೀಳಿಗೆ ತಿಳಿದುಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಜಾನಕಿ ಹೊಸೂರ್ ಇದ್ದರು. ಐಕ್ಯೂಎಸಿ ಸಂಯೋಜಕಿ ಡಾ.ಪುಟ್ಟಮಣಿ ದೇವಿದಾಸ ಸ್ವಾಗತಿಸಿದರು. ಡಾ.ಸೀಮಾ ಪಾಟೀಲ್ ಪ್ರಾರ್ಥಿಸಿದರು. ದಾಕ್ಷಾಯಣಿ ಕಾಡಾದಿ ವಂದಿಸಿದರೆ, ಡಾ.ಸಬೀಹಾ ನಿರೂಪಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net