

ಯಳಂದೂರು: ಪಟ್ಟಣದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಹಾಗೂ ಅಕ್ಷರ ದಾಸೋಹ ಕೇಂದ್ರದ ವತಿಯಿಂದ ಜಗದ್ಗುರು ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಶತೋತ್ತರ ದಶಮಾನೋತ್ಸವ (110ನೇ) ಜಯಂತಿಯನ್ನು ಗುರುವಾರ ಆಚರಿಸಲಾಯಿತು.
ಕೆಸ್ತೂರು ಪಟ್ಟದ ಮಠದ ಶ್ರೀತೋಂಟದಾರ್ಯ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜೇಂದ್ರ ಶ್ರೀಗಳು ನಾಡಿಗೆ ಮತ್ತು ದೇಶಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜತೆಗೆ ಅನ್ನ ದಾಸೋಹವನ್ನು ಮಾಡಿದ್ದಾರೆ. ದೊಡ್ಡ ಸಂಸ್ಥೆಯನ್ನು ಸ್ಥಾಪಿಸಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಇಂತಹ ಮಹಾನ್ ದಾರ್ಶನಿಕರು ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆಯಬೇಕು ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಅಭಿವೃದ್ಧಿ ವಿಭಾಗದ ನಿರ್ದೇಶಕ ರೇವಣ್ಣಸ್ವಾಮಿ ಮಾತನಾಡಿ, ರಾಜೇಂದ್ರ ಶ್ರೀಗಳನ್ನು ಹತ್ತಿರದಿಂದ ನೋಡಿದ ಸೌಭಾಗ್ಯ ನನ್ನದಾಗಿದೆ. ಅವರು ಸರಳ ಬದುಕು ಸವೆಸಿದರು. ತಮ್ಮ ಇಡೀ ಜೀವನವನ್ನು ಬಡವರಿಗೆ ಅನ್ನ, ಶಿಕ್ಷಣ ನೀಡಲು ಮೀಸಲಿಟ್ಟಿದ್ದರು. ಬಸವಣ್ಣನವರ ಕಾಯಕ ತತ್ವದಲ್ಲಿ ನಂಬಿಕೆ ಇಟ್ಟು ಅವರು ಇದನ್ನು ತಮ್ಮ ಜೀವನದುದ್ದಕ್ಕೂ ಅನುಸರಿಸಿಕೊಂಡು ಬಂದಿದ್ದರು. ಅಂತಹ ಮಹಾತ್ಮರು ಸದಾ ಕಾಲ ನಮ್ಮೊಂದಿಗೆ ಇರುತ್ತಾರೆ ಎಂದರು.
ಮೈಸೂರಿನ ಜೆಎಸ್‌ಎಸ್ ಮಹಿಳಾ ಕಾಲೇಜಿನ ಕನ್ನಡ ಅಧ್ಯಾಪಕ ಎಚ್.ಎಸ್.ಸಿದ್ದಮಲ್ಲಿಕಾರ್ಜುನ ಅವರು ನುಡಿನಮನ ಸಲ್ಲಿಸಿದರು.
ಕಾರಾಪುರದ ವಿರಕ್ತ ಮಠದ ಶ್ರೀಬಸವರಾಜ ಸ್ವಾಮೀಜಿ, ಗೌಡಹಳ್ಳಿಯ ವಿರಕ್ತ ಮಠದ ಶ್ರೀಮರಿತೋಂಟದಾರ್ಯ ಸ್ವಾಮೀಜಿ, ಮಾತನಾಡಿದರು.
ಸಮಾಜ ಸೇವಕ ದುಗ್ಗಟ್ಟಿ ಪಿ.ವೀರಭದ್ರಪ್ಪ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿ.ಚಂದ್ರಕಲಾ, ಪ್ರಾಂಶುಪಾಲ ಎಚ್.ಎಸ್.ಚಂದ್ರಶೇಖರ, ಶಿಕ್ಷಕರಾದ ಎಲ್.ವಿಶ್ವನಾಥ್, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿನಿಯರು, ಶ್ರೀಮಠದ ಭಕ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.