ನಾಗಯಕ್ಷೇ ಸಂಸ್ಥಾನದಲ್ಲಿ ನವರಾತ್ರಿ ಉತ್ಸವ

25bkl2_nagayakse
Published on

ಭಟ್ಕಳ: ಪಟ್ಟಣದ ಶ್ರೀ ನಾಗಯಕ್ಷೇ ಧರ್ಮದೇವಿ ಸಂಸ್ಥಾನದಲ್ಲಿ ನವರಾತ್ರಿ ಉತ್ಸವ ಸೆ. 26ರಿಂದ ಅ. 5ರವರೆಗೆ ಜರುಗಲಿದೆ. ನಿತ್ಯ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ. ನಾಗಯಕ್ಷೆ ದೇವಿಗೆ ನವರಾತ್ರಿ ವೇಳೆ ದಿನಕ್ಕೊಂದು ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ಅಪಾರ ಭಕ್ತಗಣ ಹೊಂದಿರುವ ಕ್ಷೇತ್ರಕ್ಕೆ ರಾಜ್ಯದಿಂದ ಮಾತ್ರವಲ್ಲದೆ, ಹೋರ ದೇಶ ಅಮೆರಿಕ, ಕೆನಡಾ, ಕ್ಯಾಲಿಪೊರ್ನಿಯಾ ದೇಶಗಳಿಂದ ಭಕ್ತರು ಆಗಮಿಸಿ ಸೇವೆ ಸಲ್ಲಿಸುತ್ತಾರೆ. ನವರಾತ್ರಿ ಪರ್ವಕಾಲದಲ್ಲಿ ಇಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆಯುತ್ತಾರೆ.

ಕಷ್ಟಗಳಿಗೆ ಪರಿಹಾರ: ನಾಗಯಕ್ಷೆ ಕ್ಷೇತ್ರಕ್ಕೆ ಹೆಚ್ಚು ಭಕ್ತರು ಬರಲು ಮುಖ್ಯ ಕಾರಣ ದೇವಿಯ ಶಕ್ತಿ. ಕಷ್ಟಗಳ ಪರಿಹಾರಕ್ಕೆ ದೇವಿಯಲ್ಲಿ ಮೊರೆ ಸಲ್ಲಿಸಿದರೆ ಶೀಘ್ರ ಒಲಿಯುತ್ತಾಳೆ ಎಂಬ ನಂಬಿಕೆ ಭಕ್ತರದ್ದು. ದೇವಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು ಅವರ ಮೈಮೇಲೆ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ನವರಾತ್ರಿಯಲ್ಲಿ 10 ದಿನ ದೇವಿಯ ಆಹ್ವಾನವಾಗುತ್ತದೆ. ಈ ವೇಳೆ ಕಷ್ಟಗಳ ಪರಿಹಾರಕ್ಕೆ ಸಾವಿರಾರು ಜನರು ದೇವಿಯಲ್ಲಿ ಪ್ರಶ್ನೆಯಿಟ್ಟು ಪರಿಹಾರ ಕಂಡುಕೊಳ್ಳುತ್ತಾರೆ. ಸಂತತಿ, ಆರೋಗ್ಯ, ಉದ್ಯೋಗ, ವ್ಯಾಜ್ಯ ಸೇರಿ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ.

ಸಾಮಾಜಿಕ ಕಾರ್ಯ: ಪಟ್ಟಣದ ವಿವಿ ರಸ್ತೆಯಲ್ಲಿರುವ ನಾಗಮಾಸ್ತಿ ದೇವಸ್ಥಾನ ಕೇವಲ ಧಾರ್ವಿುಕ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ಮುಂದಿದೆ. ಶಿಕ್ಷಣ, ಉದ್ಯೋಗ, ಬಡಹೆಣ್ಣುಮಕ್ಕಳ ಮದುವೆ ಹೀಗೆ ಕಷ್ಟ ಎಂದು ಬಂದವರಿಗೆ ಎಂದೂ ಈ ಸಂಸ್ಥಾನ ವಾಪಸ್ ಕಳುಹಿಸಿಲ್ಲ. ದೇವಿಯ ಅಪ್ಪಣೆಯಂತೆ 6 ಕೋಟಿ ರೂ. ವೆಚ್ಚದಲ್ಲಿ ನಾಗಯಕ್ಷೆ ಧಮಾರ್ಥ ಸಭಾಭವನ ನಿರ್ವಿುಸಿ ಉಚಿತವಾಗಿ ಮದುವೆ ಸಮಾರಂಭಗಳಿಗೆ ನೀಡಲಾಗುತ್ತಿದೆ. ಸಭಾಭವನದ ಪಕ್ಕ ಗೋಶಾಲೆ ನಿರ್ವಿುಸಿ 50 ಗೋವು ಪೋಷಿಸಿಲಾಗುತ್ತಿದೆ. ನಾಗಯಕ್ಷೆ ಬಾಲವಿಹಾರ ತರೆದಿದ್ದು 52 ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಪ್ರತಿವರ್ಷ 1 ಲಕ್ಷ ರೂ. ಮೌಲ್ಯದ ಉಚಿತ ಔಷಧ ನೀಡಲಾಗುತ್ತದೆ.

ಗಣ್ಯರ ಭೇಟಿ: ದೇವಸ್ಥಾನಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರು, ನ್ಯಾಯಾಧೀಶರು ಸೇರಿ ಅನೇಕ ಗಣ್ಯರು ದೇವಿಯ ದರ್ಶನ ಪಡೆದಿದ್ದಾರೆ. ಹುಬ್ಬಳ್ಳಿ ಕಿರಾಣಿ ವರ್ತಕರೊಬ್ಬರು ನವರಾತ್ರಿಗೆ 2 ಲಕ್ಷ ರೂ. ಮೌಲ್ಯದ ಆಹಾರ ಧಾನ್ಯ ದೇಣಿಗೆ ನೀಡಿದ್ದಾರೆ.

ನಾಗಯಕ್ಷೆ ಚಾರಿಟಬಲ್ ಟ್ರಸ್ಟ್ ವತಿಯಿಂದ 11 ಲಕ್ಷ ರೂ. ವೆಚ್ಚದಲ್ಲಿ ಗುರುಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಸದ್ಗುರು ಶ್ರೀಧರ ಸಭಾಭವನ ನಿರ್ವಿುಸಲಾಗಿದೆ. ಅದನ್ನು ಅಕ್ಟೋಬರ್ 1 ರಂದು ಲೋಕಾರ್ಪಣೆ ಮಾಡಲಾಗುವುದು. ರಾಮದಾಸ ಪ್ರಭು ಧರ್ಮದರ್ಶಿಗಳು ನಾಗಯಕ್ಷೆ ದೇವಸ್ಥಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net