ನವೋದಯ ಉಗಮಕ್ಕೆ ಕುವೆಂಪು ನಿದರ್ಶನಗಳೇ ಆದರ್ಶ

bkt-20-4
ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಾಹಾವಿದ್ಯಾಲಯದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕುವೆಂಪು ಸಾಹಿತ್ಯಾಧ್ಯಯನ ಕಮ್ಮಟ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ.ಬಿ.ವಿ ವಸಂತಕುಮಾರ ಉದ್ಘಾಟಿಸಿದರು. ಬಿವಿವಿ ಸಂಘದ ವೈದ್ಯಕೀಯ ಆಡಳಿತ ಅಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ ಪ್ರಕಾಶ, ಖಜಾಂಚಿ ದೇವಂಗಿ ಮನುದೇವ, ಪ್ರಾಚಾರ್ಯ ಡಾ.ವಿ.ಎಸ್.ಕಟಗಿಹಳ್ಳಿಮಠ, ಬಾಗಲಕೋಟೆ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಡಾ. ಗುರುಪಾದ ಮರಿಗುದ್ದಿ ಇತರರು ಇದ್ದರು.
Published on

ಬಾಗಲಕೋಟೆ: ಕುವೆಂಪು ಅವರ ವೈಚಾರಿಕತೆ ಮತ್ತು ನಿದರ್ಶನಗಳನ್ನು ಮೈಗೂಡಿಸೊಕೊಂಡರೆ ಮಾತ್ರ ನವೋದಯ ಸಾಹಿತ್ಯ ಬೆಳೆಯಲು ಸಾಧ್ಯ. ಕನ್ನಡಕ್ಕಾಗಿ ದುಡಿದ ರಾಷ್ಟ್ರಕವಿ ವಿಚಾರಗಳನ್ನು ಪ್ರತಿಯೊಬ್ಬರಲ್ಲಿ ಶಾಶ್ವತಗೊಳಿಸುವ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ.ಬಿ.ವಿ ವಸಂತಕುಮಾರ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಾಹಾವಿದ್ಯಾಲಯದ ಸಭಾಭವನದಲ್ಲಿ ಗುರುವಾರ ರಾಷ್ಟ್ರಕವಿ ಕುವೆಂಪು ಪ್ರತಿಷ್ಶ್ಠಾನ ಕುಪ್ಪಳ್ಳಿ, ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೀಳಗಿ, ಗುಳೆದಗುಡ್ಡ ತಾಲೂಕಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಸಾಹಿತ್ಯಾಧ್ಯಯನ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪ್ರಾದ್ಯಾಪಕರಲ್ಲಿ ಕುವೆಂಪು ಚಿಗುರೊಡೆದರೆ ಸಾಹಿತ್ಯಾಧ್ಯಯನ ಕುಮ್ಮಟ ಯಶಸ್ವಿಯಾಗುತ್ತದೆ. ಕುವೆಂಪು ಪ್ರತಿಷ್ಠಾನ ಸಜ್ಜನಿಕೆಯ, ಸಾಂಸ್ಕೃತಿಕ ಕೇಂದ್ರವಾಗಿದ್ದು ರಾಷ್ಟ್ರ‍್ರಕವಿಯನ್ನು ಶಾಶ್ವತಗೊಳಿಸುವ ಕೆಲಸ ಮಾಡುತ್ತಿದೆ ಎಂದರು.
ಪಂಪ, ಬಸವಣ್ಣ, ಕುಮಾರವ್ಯಾಸ, ಕನಕದಾಸರಂತ ಕವಿಗಳು ಕನ್ನಡ ಸಾಹಿತ್ಯದ ಬೇರುಗಳಿದ್ದಂತೆ. ಅವರ ಸಾಲಿನಲ್ಲಿ ಕುವೆಂಪು ಕೂಡ ಒಬ್ಬರು. ಅವರ ವಿಚಾರಗಳನ್ನು ಉಳಿಸಿಕೊಂಡರೆ ಮಾತ್ರ ನವೋದಯ ಶಾಸ್ತ್ರಪ್ರಜ್ಞೆ ಬೆಳೆಯಲು ಸಾಧ್ಯ. ಕುವೆಂಪುರವರ ದಾರ್ಶನಿಕತೆ, ವೈಚಾರಿಕತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವುಗಳನ್ನು ಅಧ್ಯಯನ ಮಾಡಿ ಅರ್ಥೈಸಿಕೊಳ್ಳಬೇಕಿದೆ. ಮೂಡ ನಂಬಿಕೆ ಮತ್ತು ನಾಸ್ತಿಕತೆಯ ಬೆನ್ನು ಬೀಳದೆ ಚೈತನ್ಯದ ಚಿಲುಮೆಯಾಗಿ, ಶಿವ ಪ್ರಜ್ಞೆಯ ಮೂಲಕ ತಮ್ಮ ಪುಸ್ತಕಗಳಿಂದ ಜಗತ್ತಿನ ಜಡ್ಡು ತೊಳೆಯುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಬಿವಿವಿ ಸಂಘದ ವೈದ್ಯಕೀಯ ಆಡಳಿತ ಅಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಮಾತನಾಡಿ, ವರಕವಿ ದರಾ ಬೇಂದ್ರೆ ಅವರು ಹೇಳಿದ ಯುಗದ ಕವಿಗೆ, ಜಗದ ಕವಿಗೆ, ಶ್ರೀರಾಮಾಯಣ ದರ್ಶನಂದಿಂದಲೇ ಕೈಮುಗಿದ ಕವಿಗೆ ಮನಿಯದವರಾರು ಎಂಬ ಮಾತಿನಂತೆಯೇ ಕುವೆಂಪು ಇವತ್ತಿಗೂ ಕೂಡ ಪ್ರಸ್ತುತವಾಗಿ ಉಳಿದಿದ್ದಾರೆ. ಕವಿಮನೆ ಭೇಟಿಗೆ ಇರುವ ಟಿಕೆಟ್ ಕೂಡ ಸಂಗ್ರಹಣೆಗೆ ಯೋಗ್ಯವಾಗಿರುವುದು ಒಂದು ವಿಶೇಷ. ಕುವೆಂಪು ಅವರು ಚಿಕ್ಕಂದಿನಿಂದಲೇ ಸ್ವಾಭಿಮಾನ ಮೈಗೂಡಿಸಿಕೊಂಡು ಬಂದವರು. ನಾಲ್ವಡಿ ಕೃಷ್ಣರಾಜ ಒಡೆಯರ ಪುತ್ರನಿಗೆ ಮನೆ ಪಾಠ ಹೇಳಲು ಅರಮನೆಗೆ ಹೋಗುವುದನ್ನು ತಿರಸ್ಕರಿಸಿ ಅದಕ್ಕೊಂದು ನಿದರ್ಶರಾಗಿದ್ದರು. ನಿರಂಕುಶ ಪ್ರಭುತ್ವನ್ನು ವಿರೋಧಿಸುವ, ಹಾಸ್ಯಪ್ರಜ್ಞೆ ಮತ್ತು ತಾಯಿಮಮತೆಯ ಸ್ವರೂಪವಾಗಿದ್ದ ಕುವೆಂಪು ಅವರು ಜೀವಂತವಿರುವಾಗಲೇ ದಂತಕಥೆಯಾಗಿದ್ದರು ಎಂದು ಹೇಳಿದರು.
ಡಾ. ಗುರುಪಾದ ಮರಿಗುದ್ದಿ ವಿರಚಿತ ಮಂಗರಸ ಕವಿ ಸೂಪಶಾಸ್ತ್ರ ಪುಸ್ತಕ ಬಿಡುಗಡೆಗೊಳಿಸಿದರು. ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ ಪ್ರಕಾಶ, ಖಜಾಂಚಿ ದೇವಂಗಿ ಮನುದೇವ, ಪ್ರಾಚಾರ್ಯ ಡಾ.ವಿ.ಎಸ್.ಕಟಗಿಹಳ್ಳಿಮಠ, ಬಾಗಲಕೋಟೆ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹಾಗೂ ಬಿ.ಎಚ್.ಆರ್.ಡಿ ನಿರ್ದೇಶಕ ಎಸ್.ಆರ್ ಮನಹಳ್ಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net