ನವಜಾತ ಶಿಶು ನಾಪತ್ತೆ ಪ್ರಕರಣ ಐದಾರು ಗಂಟೆಯಲ್ಲಿ ಪತ್ತೆ

5f39d5a5-b0a7-411e-938c-1b8052c77708
ನವಜಾತ ಶಿಶುವನ್ನು ಕಳ್ಳತನ ಮಾಡಿದ್ದ ಆರೋಪಿ ಸಾಕ್ಷಿ ಅವರನ್ನ ಆಸ್ಪತ್ರೆ ಸಿಬ್ಬಂದಿ ಹಿಡಿದುಕೊಂಡು ಹೋಗುತ್ತಿರುವುದು.
Published on

ಬಾಗಲಕೋಟೆ: ಹೆರಿಗೆಯಾದ 12 ಗಂಟೆಯಲ್ಲಿ ನವಜಾತ ಶಿಶುವನ್ನು ನರ್ಸ್ ಎಂದು ಹೇಳಿಕೊಂಡು ಬಂದಿದ್ದ ಮಹಿಳೆಯೊಬ್ಬರು ಶಿಶುವನ್ನು ಕಳ್ಳತನ ಮಾಡಿ ಹೈಡ್ರಾಮ ನಡೆಸಿದ್ದ ಪ್ರಕರಣ ಕೇವಲ ಐದಾರು ಗಂಟೆಯಲ್ಲೆ ಸುಖಾಂತ್ಯ ಕಂಡಿದ್ದು, ಶಿಸುವನ್ನು ಹೆತ್ತ ತಾಯಿ ಮಡಿಲು ಸೇರಿಸುವಲ್ಲಿ ಬಾಗಲಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಾಗಲಕೋಟೆ ನವನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಕಳ್ಳತನ ಮಾಡಿದ್ದ ಮಹಿಳೆ ಅದೇ ಆಸ್ಪತ್ರೆಯ ಪಕ್ಕದ ವಾರ್ಡ್ ನಲ್ಲಿ ಅದು ತಾನು ಹೆತ್ತ ಮಗು ಎಂದು ನಾಟಕವಾಡುತ್ತಿರುವುದನ್ನು ಆಸ್ಪತ್ರೆ ಪೊಲೀಸರ ಸಹಾಯದಿಂದ ಆಸ್ಪತ್ರೆ ಸಿಬ್ಬಂದಿ ಆರೋಪಿಯನ್ನ ಗುರುತಿಸುವಲ್ಲಿ ಯಶ ಕಂಡು, ನವಜಾತ ಶಿಶುವನ್ನು ಪತ್ತೆ ಮಾಡಿದ್ದಾರೆ.

ಏನಿದು ಪ್ರಕರಣ...?

ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ 30 ವಯಸ್ಸಿನ ಮಹೆಬೂಬಿ ನದಾಫ್ ಎನ್ನುವ ಮಹಿಳೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ತಾಯಿ-ಮಗು ಇಬ್ಬರೂ ಆರೋಗ್ಯವಾಗಿಯೇ ಇದ್ದಾರೆ ಎನ್ನುವುದನ್ನು ಆಸ್ಪತ್ರೆ ಸಿಬ್ಬಂದಿ ಖಚಿತ ಪಡಿಸಿದ್ದರು. ಇದಾದ ಬಳಿಕ ನವಜಾತ ಶಿಶು ನಾಪತ್ತೆ ಆಗಿತ್ತು. ಮಗು ಕಳ್ಳತನ ಮಾಡಲು ಸಿದ್ದತೆ ಮಾಡಿಕೊಂಡು ಬಂದಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಓಡಾಡುತ್ತಿದ್ದಳು. ತಾಯಿ-ಮಗುವಿನ ಆರೋಗ್ಯವನ್ನು ಸಿಬ್ಬಂದಿ ತಪಾಸಣೆ ಮಾಡಿ ಹೋಗುತ್ತಿದ್ದಂತೆ ನಸುಕಿನ ಜಾವ 4.30 ಕ್ಕೆ ಅಲ್ಲಿಗೆ ಬಂದ ಮಹಿಳೆ, ತಾನು ನರ್ಸ್ ಇದ್ದು, ಮಗುವಿನ ಕಫ ತೆಗೆಸುವುದಾಗಿ ಹೇಳಿ ಕಳ್ಳತನ ಮಾಡಿದ್ದಳು. ಕೆಲ ಹೊತ್ತಿನ ಬಳಿಕ ಶಿಶು ಕಳ್ಳತನ ಆಗಿರುವುದು ಬೆಳಕಿಗೆ ಬಂದಿತ್ತು. ಇದರಿಂದ ಮಗುವನ್ನ ಕಳೆದುಕೊಂಡ ತಾಯಿಯ ರೋಧನೆ ಮುಗಿಲು ಮುಟ್ಟಿತ್ತು.

ನವಜಾತ ಶಿಶು ಕಳ್ಳತನವಾಗಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ್ದ ಎಸ್ಪಿ ಅಮರನಾಥ ರೆಡ್ಡಿ ನೇತೃತ್ವದ ಪೊಲೀಸ್ ತಂಡ ತನಿಖೆ ತೀವ್ರಗೊಳಿಸಿದ್ದರಿಂದ ಪ್ರಕರಣ ಐದಾರು ಗಂಟೆಯಲ್ಲಿ ಪ್ರಕರಣ ಸುಖಾಂತ್ಯ ಕಂಡಿದೆ.

ಯಾರೂ ಈ ನವಜಾತ ಶಿಶುವಿನ ಕಳ್ಳಿ :

ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಕಳ್ಳತನ ಮಾಡಿದ್ದ ಮಹಿಳೆ ಸಾಕ್ಷಿ ಯಾದವಾಡ(24) ಎಂದು ಗುರುತಿಸಿದ್ದು, ಈಕೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಖಾನಪೇಟೆ ನಿವಾಸಿ. ಈಕೆ ಶುಕ್ರವಾರ ಸಂಜೆ ಆಸ್ಪತ್ರೆಯಲ್ಲಿ ಯಾವುದೇ ಪ್ರವೇಶಾತಿ ಇಲ್ಲದೆ ದಾಖಲಾಗಿ, ಹೆರಿಗೆ ವಾರ್ಡನಲ್ಲಿ ಝಾಲಿ ಇದ್ದ ಬೆಡ್ ನಲ್ಲಿ ಮಲಗಿದ್ದಳು. ನಸುಕಿನ ಜಾಗ ತಾನು ಕದ್ದು ತಂದಿದ್ದ ಮಗುವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಅಕ್ಕಪಕ್ಕದವರಿಗೆ ಈ ಮಗುವಿಗೆ ಜನ್ಮ ನೀಡಿದೆ ಎಂದು ಹೇಳಿಕೊಳ್ಳುತ್ತಿದ್ದಳು.

ನವಜಾತ ಶಿಶು ಕಳ್ಳತನವಾಗಿದೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಬೆಳಗ್ಗೆ 9.30 ಕ್ಕೆ ಆಸ್ಪತ್ರೆಯಲ್ಲಿ ಮಹಿಳೆ ಒಪಿಡಿ ಮಾಡಿಸಿದ್ದಳು. ಪಾರಾಗಲು ಪ್ರಯತ್ನ ನಡೆಸಿದ್ದಳು. ಆದರೆ, ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಮಗುವನ್ನ ರಕ್ಷಿಸಿದ್ದಾರೆ.

ನವಜಾತ ಶಿಶು ಕಳ್ಳತನ ಒಂದು ವರ್ಷದ ಪ್ಲಾನ್ :

ಆರೋಪಿ ಸಾಕ್ಷಿ ಅವರು ಒಟ್ಟು ಏಳು ಜನ ಸಹೋದರಿಯರು ಇದ್ದು, ಆರು ಜನರಿಗೆ ಮಕ್ಕಳು ಆಗಿವೆ. ಸಾಕ್ಷಿ ಮದುವೆಯಾಗಿ ಎರಡು ವರ್ಷವಾಗಿದ್ದು, ತನಗೆ ಮಕ್ಕಳು ಆಗಲ್ಲ ಎನ್ನುವ ಅನುಮಾನ ಕಾಡುತ್ತಿತ್ತು. ತನಗೆ ಮಕ್ಕಳು ಆಗಲ್ಲ ಎಂದು ಕುಟುಂಬದಲ್ಲಿ ಹಾಗೂ ಊರ ಜನರಿಂದ ಮಾತು ಕೇಳಿಸಿಕೊಳ್ಳಬೇಕಾಗುತ್ತದೆ ಎಂದು ನವಜಾತ ಶಿಶು ಕಳ್ಳತನದ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಳು. ಅದರಂತೆ ಹೆರಿಗೆಗೆ ಬೇಕಾಗುವ 9 ತಿಂಗಳು 9 ದಿನಗಳು ಬರುವಂತೆ ಯೋಜನೆ ಹಾಕಿಕೊಂಡಿದ್ದಳು.

2024 ತಾನು ಗರ್ಭಿಣಿ ಆಗಿದ್ದಾಗಿ ಕುಟುಂಬ ಹಾಗೂ ಊರ ಜನರನ್ನು ನಂಬಿಸಿದ್ದಳು. ಬೆಳಗಾವಿ ಜಿಲ್ಲೆ ಕಡಕೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಸರಿನಲ್ಲಿ ಫೇಕ್ ತಾಯಿ ಕಾರ್ಡ್ ಸಹ ಮಾಡಿಸಿದ್ದಳು. ತಾಯಿ ಕಾರ್ಡನಲ್ಲಿ ತನ್ನ ಅನುಕೂಲಕ್ಕೆ ತಕ್ಕಂತೆ ದಿನಾಂಕ ತಿದ್ದುಪಡಿ ಮಾಡುತ್ತ ಬಂದಿದ್ದಳು.

ಗರ್ಭಿಣಿಯರಂತೆ ಆಸ್ಪತ್ರೆಯಲ್ಲಿ ರೂಟಿನ್ ಚೆಕ್ ಅಪ್ ಮಾಡಿಸಿದ್ದೇನೆಂದು ಹೇಳುಕೊಳ್ಳುತ್ತಿದ್ದಳು. ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ 05.11.2024, 05-03-2025, 29-05-2025 ಒಟ್ಟು ಮೂರು ಸಲ ಒಪಿಡಿ ಮಾಡಿಸಿದ್ದಳು. ಒಪಿಡಿ ಮಾಡಿಸಿ ಯಾವುದೇ ಚಿಕಿತ್ಸೆ ಪಡೆಯದೇ ಹೋಗಿದ್ದಳು. ಒಂದು ಸಲ ಗರ್ಭದ ಬಗ್ಗೆ ಸ್ಕ್ಯಾನಿಂಗ್ ಮಾಡಿಸಿದಾಗ ಅದರಲ್ಲಿ ನೆಗಟಿವ್ ತೋರಿಸಿತ್ತು.

ತನಗೆ ಜೂನ್ 14 ರಂದು ಹೆರಿಗೆ ಆಗಲಿದೆ ಎಂದು ನಿನ್ನೆ ಸಂಜೆ ತನ್ನ ತಂದೆ, ತಾಯಿ, ಒಬ್ಬ ಸಹೋದರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಳು. ಅವರನ್ನು ಆವರಣದಲ್ಲಿ ಬಿಟ್ಟು ತಾನು ಹೆರಿಗೆ ವಾರ್ಡ್ ನಲ್ಲಿ ಖಾಲಿ ಇದ್ದ ಬೆಡ್ ನಲ್ಲಿ ಮಲಗಿದ್ದಳು. ರಾತ್ರಿ ಆಸ್ಪತ್ರೆಯಲ್ಲಿ ಎಷ್ಟು ಹೆರಿಗೆ ಆಗುತ್ತಿವೆ ಎಂದು ಗಮಸಿದ್ದಳು. ಶುಕ್ರವಾರ ಒಟ್ಟು 5 ಜನರಿಗೆ ಹೆರಿಗೆ ಆಗಿದ್ದು, ಅದರಲ್ಲಿ ಮುಗ್ದವಾಗಿದ್ದ ಮೆಹಬೂಬಿ ನದಾಫ್ ಅವರ ನವಜಾತ ಶಿಶು ಅಪಹರಿಸಲು ಪ್ಲಾನ್ ಮಾಡಿದ್ದಾಳೆ. ಯಾರು ಇಲ್ಲದ ವೇಳೆ ಆಕೆಗೆ ತಾನು ಸ್ಟಾಪ್ ನರ್ಸ್ ಎಂದು ಪರಿಚಯಿಸಿಕೊಂಡು ಮಗುವಿಗೆ ಕಫ ತೆಗೆಸಬೇಕಾಗಿದೆ ಎಂದು ಶಿಶು ತೆಗೆದುಕೊಂಡು ಹೋಗಿದ್ದಾಳೆ.

ಡಾಕ್ಟರ್ ಹೆಸರಿನಲ್ಲಿ ಕುಟುಂಬದವರಿಗೆ ಮಾಹಿತಿ:

ಮಗು ತೆಗೆದುಕೊಂಡು ಹೋಗುವ ಮುನ್ನ ಮೆಹಬೂಬಿ ಅವರ ಸಹೋದರಿಯ ಮೊಬೈಲ್ ತೆಗೆದುಕೊಂಡು ಅದರಿಂದ ತನ್ನ ತಾಯಿಗೆ ಫೋನ್ ಮಾಡಿ ತಾವು ಡಾಕ್ಟರ್ ಅಶ್ವಿನಿ ರಾಠೋಡ ಎಂದು ಹೇಳಿಕೊಂಡು ಸಾಕ್ಷಿಗೆ ಈಗ ಹೆರಿಗೆಗೆ ಕರೆದುಕಡು ಹೋಗುತ್ತಿದ್ದೇವೆ ಹೆರಿಗೆ ಆದ ಬಳಿಕ ಬೆಳಗ್ಗೆ ನೀವು ತಾಯಿ ಮಗುವನ್ನು ನೋಡಬಹುದು ಎಂದು ಮಾಹಿತಿ ಕೊಟ್ಟಿದ್ದಾಳೆ. ಆ ಮೂಲಕ ತನ್ನೊಂದಿಗೆ ಕರೆದುಕೊಂಡು ಬಂದಿದ್ದ ಕುಟುಂಬದವರನ್ನ ನಂಬಿಸಿದರೆ ಊರಲ್ಲಿ ತನಗೆ ಮಗುವಾಗಿದೆ ಎನ್ನುವ ಸುದ್ದಿ ಹೋಗುತ್ತದೆ ಎನ್ನುವ ಪ್ಲಾನ್ ಸಾಕ್ಷಿಯದ್ದಾಗಿತ್ತು. ಆದರೆ, ಅದೇ ಫೋನ್ ಮಾಡಿದ್ದೇ ಪೊಲಿಸರಿಗೆ ಆರೋಪಿ ಸುಳಿವು ಸಿಗಲು ಪ್ರಮುಖ ಘಟನೆಯಾಗಿ ಆರೋಪಿ ಪ್ಲಾನ್ ಉಲ್ಟಾ ಹೊಡೆದು ಇದೀಗ ಪೊಲೀಸ್ ಅತಿಥಿ ಆಗಿದ್ದಾಳೆ. ಇನ್ನು 15 ನಿಮಿಷ ಕಳೆದಿದ್ದರೆ ಸಾಕ್ಷಿ ಆಸ್ಪತ್ರೆಯಿಂದ ಮಗುವನ್ನು ತೆಗೆದುಕೊಂಡು ಅಲ್ಲಿಂದ ಪರಾರಿ ಆಗುತ್ತಿದ್ದಳು. ಅಷ್ಟರಲ್ಲಿ ನಾವು ಪತ್ತೆ ಮಾಡಿದೇವು. ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಸಾಕ್ಷಿಯನ್ನು ಬಂಧಿಸಿ, ಆಕೆಯ ತಾಯಿ, ತಂದೆ, ಸಹೋದರಿಯ ವಿಚಾರಣೆ ನಡೆಸುತ್ತಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದರು.

ಆಸ್ಪತ್ರೆ ಆವರಣದಲ್ಲೆ ಇತ್ತು ಪೋನ್ : ನವಜಾತ ಶಿಶು ಕಳ್ಳತನ ಆಗಿರುವ ಸುದ್ದಿ ಬೆನ್ನಲ್ಲೆ ಆರೋಪಿಗಳಿಗೆ ಜಾಲ ಬೀಸಿದ್ದ ಪೊಲೀಸರು, ಸಾಕ್ಷಿ ಮಾಡಿದ್ದ ಫೋನ್ ನಂಬರ್ ಸಿಡಿಆರ್ ಗೆ ಹಾಕಿದಾಗ ಅದು ಜಿಲ್ಲಾ ಆಸ್ಪತ್ರೆಯಲ್ಲೆ ತೋರಿಸಿದೆ. ಈ ಬಗ್ಗೆ ಆಸ್ಪತ್ರೆ ಸರ್ಜನ್ ಡಾ.ಮಹೇಶ್ ಕೋಣೆ ಅವರಿಗೆ ಆರೋಪಿ ಆಸ್ಪತ್ರೆಯಲ್ಲೆ ಇದ್ದು, ಪರಿಶೀಲನೆ ನೇಸುವಂತೆ ಸೂಚಿಸಿದ್ದಾರೆ. ಆಸ್ಪತ್ರೆಯ ದಾಖಲೆ ಪರಿಶೀಲಿಸಿದಾಗ ಸಾಕ್ಷಿ ಶಿಶು ಕದ್ದಿರುವುದು ಬೆಳಕಿಗೆ ಬಂದಿದೆ. ಆರಂಭದಲ್ಲಿ ಆರೋಪ ಅಲ್ಲಗಳೆದರೂ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬಯಲಾಗಿದೆ.

ನಿರ್ಲಕ್ಷ್ಯದ ಬಗ್ಗೆ ವಿಚಾರಣೆ:

ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ ಪ್ರಕರಣ ಸುಖಾಂತ್ಯ ಕಂಡಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಜೊತೆಗೆ ಶುಕ್ರವಾರ ರಾತ್ರಿ ಆಸ್ಪತ್ರೆಯಲ್ಲಿ ಡ್ಯೂಟಿ ಮೇಲಿದ್ದ ವೈದ್ಯರು ಹಾಗೂ ಸಿಬ್ಬಂದಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ವಿಚಾರಣೆ ನಡೆಸಲಾಗುವುದು. ಹಾಗೆಯೇ ಆಸ್ಪತ್ರೆಯಲ್ಲಿ ಭದ್ರತೆ ಹೆಚ್ಚಿಸಲಾಗುದು ಎಂದು ಜಿಲ್ಲಾ ಆಸ್ಪತ್ರೆ ಸರ್ಜನ್ ಮಹೇಶ ಕೋಣೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net