ನರೇಗಾದಿಂದ ಸರ್ಕಾರಿ ಶಾಲೆ ಸಮಗ್ರ ಅಭಿವೃದ್ಧಿಪಡಿಸಿ

11 mlv 5
Published on

ಮಳವಳ್ಳಿ: ನರೇಗಾ ಯೋಜನೆಯ ಮೂಲಕ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸರ್ಕಾರಿ ಶಾಲೆಯನ್ನು ಸಮಗ್ರ ಅಭಿವೃದ್ಧಿಗೆ ಮುಂಬರುವ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಸೇರಿಸಿ ಆಕರ್ಷಕವಾಗಿ ಅಭಿವೃದ್ಧಿಪಡಿಸಬೇಕೆಂದು ಪಿಡಿಒಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಿಡಿಒಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ.

ಗ್ರಾಮಾಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆ ವಹಿಸುವುದರ ಮೂಲಕ ಸರ್ಕಾರದ ಎಲ್ಲ ಯೋಜನೆಯ ಅನುದಾನ ದುರುಪಯೋಗವಾಗದಂತೆ ಕ್ರಮ ವಹಿಸಬೇಕು ಎಂದ ಅವರು, ಸಾರ್ವಜನಿಕರಿಗೆ ಲಭ್ಯವಾಗುವಂತೆ ಕೆಲಸ ನಿರ್ವಹಿಸುವುದರ ಜತೆಗೆ ಕೆಲಸದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಪಿಡಿಒಗಳಿಗೆ ಸಲಹೆ ನೀಡಿದರು.

ಇಲಾಖಾವಾರು ಅಧಿಕಾರಿಗಳಿಂದ ಮಾಹಿತಿ ಪಡೆದು ಅನುಷ್ಠಾನ ಇಲಾಖೆಗಳು ನಿಗದಿತ ಅವಧಿಯೊಳಗೆ ಯೋಜನೆಗಳು ಸಾರ್ವಜನಿಕರಿಗೆ ತಲುಪುವಂತೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯ ನಂತರ ಪಟ್ಟಣದ ಅಂಗನವಾಡಿ ಕೇಂದ್ರ ವೊಂದಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರದಲ್ಲಿನ ಮಕ್ಕಳೊಂದಿಗೆ ಕೆಲ ಸಮಯ ಕಳೆದರು. ಕೇಂದ್ರದಲ್ಲಿ ಅಳವಡಿಸಿರುವ ವಿವಿಧ ಫಲಕಗಳನ್ನು ಪುಟಾಣಿಗಳಿಗೆ ತೋರಿಸಿ ಅವರಿಂದ ಬರುತ್ತಿದ್ದ ಮಾರುತ್ತರವನ್ನು ಆಲಿಸಿ ಸಂತಸ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆ ಪೋಷಣ ಟ್ರಾಕರ್ ದಾಖಲಾತಿ ಹಾಗೂ ತೂಕ, ಎತ್ತರ ಪರಿಶೀಲನೆ ಹಾಗೂ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಉಪಾಹಾರ ಮತ್ತು ಕೋಳಿ ಮೊಟ್ಟೆಗಳನ್ನು ನೀಡಿರುವ ಬಗ್ಗೆ ದಾಖಲೆಗಳನ್ನು ಪರಿಶೀಲನೆ ಮಾಡಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ತಾಪಂ ಯೋಜನಾಧಿಕಾರಿ ದೀಪು, ಸಹಾಯಕ ನಿರ್ದೇಶಕರಾದ ಪಾರ್ಥಸಾರಥಿ, ಲಿಂಗರಾಜು, ಎಲ್ಲ ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಗ್ರಾಪಂಗಳ ಪಿಡಿಒಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net