ನಮ್ಮೊಳಗಿನ ಜ್ಞಾನ ಬೆಳಗಲು ಪತ್ರಿಕೆಗಳು ಸಹಕಾರಿ

patrika
ಶೃಂಗೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಜಿ.ಎಂ.ರಾಜಶೇಖರ್ ಉದ್ಘಾಟಿಸಿದರು. ರಾಜೇಶ್, ಪ್ರಸನ್ನ , ಅಶ್ವಿನಿ, ಶಿವಶಂಕರ್ ಇತರರಿದ್ದರು.
Published on

ಶೃಂಗೇರಿ: ಜಗತ್ತಿನ ಆಗುಹೋಗುಗಳ ಮಾಹಿತಿ ನೀಡುವ ಪತ್ರಿಕೆ ನಮ್ಮೊಳಗಿನ ಜ್ಞಾನ ಬೆಳಗಲು ಸಹಕಾರಿ. ಮೊಬೈಲ್‌ನಲ್ಲಿ ಹಲವಾರು ಸುದ್ದಿ ಬಂದರೂ ಪತ್ರಿಕೆಗಳನ್ನು ಓದುವುದನ್ನು ಯುವ ಜನತೆ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್ ಹೇಳಿದರು.

ಸೋಮವಾರ ಸಚ್ಚಿದಾನಂದಪುರದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪತ್ರಕರ್ತರ ಜತೆ ನಿಕಟ ಸಂಪರ್ಕ ಹೊಂದಿರಬೇಕು. ಗ್ರಾಮದಲ್ಲಿ ನಡೆಯುವ ಸಮಸ್ಯೆಗಳನ್ನು ತಿಳಿಸಬೇಕು. ಆಗ ಮಾತ್ರ ಸಮಸ್ಯೆಗಳು ಸಂಬಂಧಪಟ್ಟವರನ್ನು ತಲುಪಲು ಸಾಧ್ಯ. ಯುವ ಜನತೆ ಸಾಮಾನ್ಯ ಜ್ಞಾನದ ಜತೆ ಸಂಸ್ಕೃತಿ ಮೌಲ್ಯ ಅರಿತುಕೊಂಡಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಬಹುದು ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಮಾತನಾಡಿ, ಪ್ರತಿ ವಿದ್ಯಾರ್ಥಿಯಲ್ಲೂ ಪ್ರತಿಭೆ ಅಡಗಿರುತ್ತದೆ. ಕ್ರಿಯಾಶೀಲತೆ ಹಾಗೂ ಸಾಮರ್ಥ್ಯ ಯಶಸ್ಸಿನ ಗುಟ್ಟು. ವಸತಿ ನಿಲಯದಲ್ಲಿ ನಡೆಯುವ ಸಮಾರಂಭದ ಕುರಿತು ವರದಿ ಮಾಡುವ ಸೃಜನಶೀಲತೆ ಬೆಳೆಸಿಕೊಂಡಾಗ ಭವಿಷ್ಯದಲ್ಲಿ ಉತ್ತಮ ವರದಿಗಾರ ಆಗಬಹುದು ಎಂದು ಹೇಳಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷೆ ಶೋಭಾ ಅನಂತಯ್ಯ, ಜಿಲ್ಲಾ ಪತ್ರಕರ್ತರ ಸಂಘದ ಕೋಶಾಧ್ಯಕ್ಷ ರಾಜೇಶ್, ಸಹ ಕಾರ್ಯದರ್ಶಿ ಪ್ರಸನ್ನ, ಕಾರ್ಯಕಾರಿಣಿ ಸದಸ್ಯ ಅಂಗುರ್ಡಿ ದಿನೇಶ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಅಶ್ವಿನಿ, ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ರಂಜಿತ್, ಪ್ರಧಾನ ಕಾರ್ಯದರ್ಶಿ ಸಸಿಮನೆ ಶಿವಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net