

ಬಾಗಲಕೋಟೆ: ಮಠಗಳು, ರೈತರು ಸೇರಿದಂತೆ ಹಲವರು ಎದುರಿಸತ್ತಿರುವ ವಕ್ಪ್ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಒದಗಿಸಬೇಕು. ಯಾವುದೇ ಸಂದರ್ಭದಲ್ಲಿಯೂ ಭೂಮಿ ಕಳೆದುಕೊಳ್ಳುವುದಕ್ಕೆ ಅವಕಾಶ ನೀಡಬಾರದು. ಇದಕ್ಕಾಗಿ ಬಿಜೆಪಿ ರಾಜ್ಯವ್ಯಾಪಿ ಹೋರಾಟ ನಡೆಸಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಭೂಮಿ ನಮ್ಮ ಹಕ್ಕು ಶೀರ್ಷಿಕೆಯಡಿ ಬಿಜೆಪಿ ಜನ ಜಾಗೃತಿ ಆಂದೋಲನ ಹಮ್ಮಿಕೊಂಡಿದೆ. ಅದು ವಕ್ ಸಮಸ್ಯೆ ಎದುರಿಸುವ ಅಹವಾಲುಗಳನ್ನು ಆಲಿಸಲಾಗುವುದು ಎಂದರು.
ಜಿಲ್ಲೆಯ ಹಲವೆಡೆ ಜನರ ಆಸ್ತಿಗಳ ಪಹಣಿಯಲ್ಲಿ ವಕ್ ಎಂದು ನಮೂದಿಸಲಾಗಿದೆ. ಬಿಜೆಪಿ ಪ್ರತಿಭಟನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಪಹಣಿಯಲ್ಲಿ ವಕ್ ಹೆಸರನ್ನು ತೆಗೆದು ಹಾಕಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇದು ಉಪಚುನಾವಣೆಯ ಗಿಮಿಕ್ ಆಗಬಾರದು. ಹೆಸರು ತೆಗೆದು ಹಾಕಿದರೆ ಸಾಲದು. ೧೯೭೪ರಲ್ಲಿ ಹೊರಡಿಸಿರುವ ಗೆಜೆಟ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿಯ ಮೂರು ತಂಡಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿವೆ. ರೈತರ, ಮಠಗಳ, ಸಾರ್ವಜನಿಕರ ಸಮಸ್ಯೆಯನ್ನು ಆಲಿಸಲಿವೆ. ಜನರು ಎದುರಿಸುತ್ತಿರುವ ಸಮಸ್ಯೆಯನ್ನು ಬೆಳಗಾವಿಯ ವಿಧಾನಮಂಡಲ ಅಧೀವೇಶನದಲ್ಲಿ ಚರ್ಚೆ ಮಾಡಲಾಗುವುದು. ಡಿಸೆಂಬರ ಮೊದಲ ವಾರದಲ್ಲಿ ತಂಡಗಳು ಭೇಟಿ ನೀಡಲಿವೆ ಎಂದು ತಿಳಿಸಿದರು.
ವಕ್‌ಗೆ ಸಂಬಂಧಿಸಿದ ಸಮಸ್ಯೆಗೆ ತಾರ್ಕಿಕ ಪರಿಹಾರ ಕಂಡುಕೊಳ್ಳುವವರೆಗೆ ಬಿಜೆಪಿ ಹೋರಾಟ ಮಾಡಲಿದೆ. ಪ್ರತಿ ಜಿಲ್ಲೆಯಲ್ಲಿಯೂ ಐವರ ತಂಡ ರಚಿಸಲಾಗಿದೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು. ಪ್ರತಿಯೊಬ್ಬರು ತಮ್ಮ ಪಹಣಿಯಲ್ಲಿ ವಕ್ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಕೇಂದ್ರ ವಕ್ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ. ತಿದ್ದುಪಡಿ ತಂದರೆ ಆಸ್ತಿ ಉಳಿಸಿಕೊಳ್ಳಲಾಗುವುದಿಲ್ಲ ಎಂದು ತರಾತುರಿಯಲ್ಲಿ ರೈತರ ಆಸ್ತಿ ಕಬಳಿಸಲು ವಕ್ ಮುಂದಾಗಿದೆ ಎಂದು ಆರೋಪಿಸಿದ ಅವರು, ಒಂದೇ ಒಂದು ಎಕರೆ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಬಿಡುವುದಿಲ್ಲ. ಜನರು ಜಾಗೃತಿಗೊಳ್ಳಬೇಕು ಎಂದರು.
ಮುಖಂಡರಾದ ರಾಜು ನಾಯ್ಕರ, ಮಲಯ್ಯ ಮೂಗನೂರಮಠ ಸತ್ಯನಾರಾಯಣ ಹೇಮಾದ್ರಿ, ಶಿವಾನಂದ ಸುರಪುರ ಇದ್ದರು.