

ವಿಜಯವಾಣಿ ಸುದ್ದಿಜಾಲ ಕಾರವಾರ: ರಾತ್ರಿಯವರೆಗೂ ಸಾಮಾನ್ಯ ಜಾನಪದ ಕಲಾವಿದರಂತೆ ಮಕ್ಕಳ ಜತೆ ಬೆರೆತು ಹಾಡು ಹೇಳಿ, ನೃತ್ಯ ಮಾಡುತ್ತ ಕಾಲ ಕಳೆಯುತ್ತಿದ್ದರು. ಸೋಮವಾರ ಮಧ್ಯಾಹ್ನ ಮಾಧ್ಯಮಗಳನ್ನು ನೋಡಿದ ಹೊನ್ನಾವರದ ಖರ್ವಾ ಜನರಿಗೆ ಅತ್ಯಾಶ್ಚರ್ಯ ಕಾದಿತ್ತು. ತಮ್ಮ ಜತೆಗೇ ಇಡಿ ದಿನ ಇದ್ದ ಸಾಮಾನ್ಯ ವ್ಯಕ್ತಿಗೆ ಭಾರತ ಸರ್ಕಾರದ ಅತ್ಯುನ್ನತ ಗೌರವ ಬಂದಿರುವ ಸುದ್ದಿ ಕೇಳಿ ಜನ ಮೂಕವಿಸ್ಮಿತರಾಗಿದ್ದರು.
ಬಳ್ಳಾರಿ ಜಿಲ್ಲೆಯಲ್ಲಿ ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರೀ ಪುರಸ್ಕಾರವನ್ನು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಮಂಜಮ್ಮ ಪ್ರಶಸ್ತಿ ಪ್ರಕಟವಾಗುವ ಸಮಯಕ್ಕೆ ಹೊನ್ನಾವರದ ಖರ್ವಾದಲ್ಲಿ ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರಾರ್ಥಿಗಳಿಗೆ ಸ್ವತಃ ನಿಂತು ಹಾಡು, ನೃತ್ಯ ಹೇಳಿಕೊಡುತ್ತಿದ್ದರು.
ಮಂಗಳವಾರ ‘ವಿಜಯವಾಣಿ’ ಜತೆ ಮಾತನಾಡಿದ ಅವರು, ‘ಮಧ್ಯಾಹ್ನ 12.30 ಕ್ಕೆ ನನಗೆ ದೆಹಲಿಯಿಂದ ಕರೆ ಬಂತು. ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿ ಈ ವಿಷಯ ತಿಳಿಸಿದರು. ಆಗ ನಾನು ಈ ಪ್ರಶಸ್ತಿಗೆ ಅರ್ಹಳಾ ಎಂಬ ಅನುಮಾನ ಹುಟ್ಟಿ ಭಾವುಕಳಾದೆ. ಖುಷಿಯಿಂದ ಕಣ್ಣೀರು ಉಮ್ಮಳಿಸಿ ಬಂತು. ಈ ಪ್ರಶಸ್ತಿ ನನಗಲ್ಲ. ನನ್ನ ತಂದೆ ತಾಯಿಗೆ, ನನ್ನನ್ನು ಬೆಳೆಸಿದ ಕನ್ನಡದ ಜನತೆಗೆ, ಕಲಿಸಿದ ಗುರುಗಳಿಗೆ’ ಎನ್ನುತ್ತ ಭಾವುಕರಾದರು.
‘ಒಬ್ಬ ತೃತೀಯ ಲಿಂಗಿಯಾದ ನನ್ನನ್ನು ಕರ್ನಾಟಕ ಸರ್ಕಾರ ಜಾನಪದ ಅಕಾಡೆಮಿ ಅಧ್ಯಕ್ಷೆಯನ್ನಾಗಿ ಮಾಡಿದೆ. ನಾನು ಮೊದಲಿನಿಂದಲೂ ಕಲೆಯನ್ನು ಬೆಳೆಸುವ ಕೆಲಸ ಮಾಡುತ್ತಿದ್ದೇನೆ. ಪ್ರಶಸ್ತಿ ಬಂದಿದ್ದಕ್ಕೆ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ. ನಾನು ಸಂತೆಯಲ್ಲಿ, ದೇವಸ್ಥಾನದಲ್ಲಿ ಎಲ್ಲೆಲ್ಲೋ ಮಲಗಿದೆ. ಯಾರೋ ಕೊಟ್ಟದ್ದನ್ನು ತಿಂದೆ. ಕಾಳಪ್ಪ ಜೋಗತಿ ಎಂಬ ಗುರು ನನಗೆ ಸಿಕ್ಕರು. ಅವರ ಶಿಷ್ಯಳಾಗಿ, ಮಗಳಾಗಿ ಜೋಗತಿ ನೃತ್ಯ ಕಲಿತೆ. ಅಲ್ಲಿಯವರೆಗೆ ಮೂಲೆ ಗುಂಪಾಗಿದ್ದ ಜೋಗತಿ ನೃತ್ಯವನ್ನು ಮುಖ್ಯವಾಹಿನಿಗೆ ತಂದು ರಾಜ್ಯಾದ್ಯಂತ ಪ್ರದರ್ಶಿಸಿದ ಹೆಮ್ಮೆ ನನಗಿದೆ’ ಎಂದರು.
ಗುರು ಶಿಷ್ಯ ಪರಂಪರೆ ಕಾರ್ಯಕ್ರಮದಲ್ಲಿ 10 ಜನರಿಗೆ ಜೋಗತಿ ನೃತ್ಯ ಕಲಿಸಿದ್ದೇನೆ. ದೇಶದ ವಿವಿಧ ರಾಜ್ಯಗಳ ಆಸಕ್ತರಿಗೂ ಕಲಿಸಿದ್ದೇನೆ. ಈಗ ಅಕಾಡೆಮಿ ಅಧ್ಯಕ್ಷೆಯಾದಾಗಿನಿಂದ ನಿರಂತರವಾಗಿ ಕಾರ್ಯಕ್ರಮ ನಡೆಸಿ ಗಿರಿಜನರು, ಪರಿಶಿಷ್ಟರು, ಸಾಮಾನ್ಯರಿಗೆ ಚರ್ಮ ವಾದ್ಯ ಹಾಗೂ ವಿವಿಧ ಜಾನಪದ ಕಲಾ ಪ್ರಾಕಾರಗಳನ್ನು ಕಲಿಸುವ ಕಾರ್ಯ ಮಾಡುತ್ತಿದ್ದೇನೆ’ ಎಂದು ತಮ್ಮ ಕಾರ್ಯವನ್ನು ಮಂಜಮ್ಮ ಹೆಮ್ಮೆಯಿಂದ ಹೇಳಿಕೊಂಡರು.
ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಅವರ ಪುಣ್ಯದ ನಾಡಿನಲ್ಲಿ ನಾನಿದ್ದೇನೆ. ಅವರ ಊರಿನ ಗಾಳಿಯ ಪರಿಣಾಮವೋ ಏನೋ ನನಗೂ ಪದ್ಮಶ್ರೀ ಪುರಸ್ಕಾರ ಘೊಷಣೆಯಾಗಿದೆ. ಇಲ್ಲಿನ ವಾತಾವರಣ ನೋಡಿ ತುಂಬಾ ಖುಷಿಯಾಗಿದೆ. | ಮಂಜಮ್ಮ ಜೋಗತಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ