ನದಿ ಮಲಿನ ತಡೆಗೆ ಜಲಶುದ್ಧಿ ನಿರ್ವಹಣಾ ಘಟಕ

5 vpt 1
Published on

ವಿರಾಜಪೇಟೆ: ದಿನದಿಂದ ದಿನಕ್ಕೆ ನಗರದ ವ್ಯಾಪ್ತಿ ಸೇರಿದಂತೆ ಜನಸಂಖ್ಯೆ ದ್ವಿಗುಣಗೊಳ್ಳುತಿದ್ದೆ. ಜಲಮೂಲಗಳು ಕಲುಷಿತವಾಗುತ್ತಿವೆ, ತೋಡುಗಳು ಮತ್ತು ಇತರೆಡೆಗಳಿಂದ ಸಂಗ್ರಹಗೊಂಡ ತ್ಯಾಜ್ಯ ನದಿ ಸೇರುತ್ತಿದೆ. ಈ ನಿಟ್ಟಿನಲ್ಲಿ ನದಿಯನ್ನು ಸಂರಕ್ಷಣೆ ಮಾಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ ಎಂದು ಪುರಸಭೆ ಅಧ್ಯಕ್ಷೆ ಎಂ.ಕೆ.ದೇಚಮ್ಮ ಕಾಳಪ್ಪ ತಿಳಿಸಿದರು.

ಜಲಶುದ್ಧಿ ನಿರ್ವಹಣಾ ಘಟಕ ನಿರ್ಮಾಣಕ್ಕೆ ಸುಮಾರು 2 ಕೋಟಿ ರೂ. ಅನುದಾನ ಶಾಸಕರ ವಿಶೇಷ ಪ್ರಯತ್ನದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಮಂಗಳವಾರ ಎಂ.ಕೆ.ದೇಚಮ್ಮ ಕಾಳಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ನಗರವಾಸಿಗಳ ಗೃಹಗಳಿಂದ ಮತ್ತು ವಾಣಿಜ್ಯ ಸಂಕೀರ್ಣ, ಜನವಸತಿ ಪ್ರದೇಶಗಳಿಂದ ಸಂಗ್ರಹವಾಗುವ ತ್ಯಾಜ್ಯ ಮತ್ತು ಮಲಿನವಾದ ನೀರು ನಗರದ ವಿವಿಧ ಭಾಗಗಳಲ್ಲಿ ಹರಿಯುವ ತೋಡು, ಕಿರು ತೋಡುಗಳು ಕಾಲುವೆಗೆ ಸೇರುತ್ತಿದೆ. ತೋಡುಗಳಲ್ಲಿ ಸಂಗ್ರಹಗೊಂಡ ಮಲಿನ ನೀರು ನೇರವಾಗಿ ನದಿಯನ್ನು ಸೇರುತ್ತಿದೆ. ಇದರಿಂದ ನದಿ ಮಲಿನವಾಗಿ ಜಲಚರಗಳು, ಪ್ರಾಣಿ ಸಂಕುಲ, ಮನುಜನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದನ್ನು ಮನಗಂಡು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆಗಿರುವ ಎ.ಎಸ್.ಪೊನ್ನಣ್ಣ ಅವರ ವಿಶೇಷ ಪ್ರಯತ್ನದಿಂದ ಪರಿಸರ ಮಾಲಿನ್ಯ ನಿರ್ಮೂಲನ ಮಂಡಳಿಯ ಅಧೀನದಲ್ಲಿ ಬರುವ ಎನ್.ಜಿ.ಟಿ ಹಾಗೂ ಎಸ್.ಬಿ.ಎಂ.(ಯು) ಅನುದಾನದಲ್ಲಿ ಜಲಶುದ್ಧಿ ಅಭಿಯಾನದ ಅಡಿಯಲ್ಲಿ (ಬಳಸಿದ ನೀರು ನಿರ್ವಹಣೆ) ಘಟಕ ಸ್ಥಾಪನೆಗೆ 2.76 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಿದ್ದಾರೆ. ಈ ಯೋಜನೆಯಲ್ಲಿ ಪುರಸಭೆಯ ವ್ಯಾಪ್ತಿಯಲ್ಲಿ ಸುಮಾರು 3 ಎಕರೆ ಪ್ರದೇಶದಲ್ಲಿ ಘಟಕ ಸ್ಥಾಪನೆಗೆ ಸ್ಥಳ ನಿಗದಿ ಮಾಡುವ ಕಾರ್ಯಕ್ಕೆ ಪುರಸಭೆ ಮುಂದಾಗಿದೆ.

ಯೋಜನೆಯಿಂದ ತೋಡುಗಳಲ್ಲಿ ಸಂಗ್ರಹಗೊಂಡು ತ್ಯಾಜ್ಯ ನೀರು ನೇರವಾಗಿ ಸಂಸ್ಕರಣ ಘಟಕಕ್ಕೆ ಬರುತ್ತದೆ. ಘಟಕದಲ್ಲಿ ತ್ಯಾಜ್ಯ ನೀರು ಶುದ್ಧೀಕರಣಗೊಳಿಸಿ ನದಿಗೆ ಹರಿಯ ಬಿಡಲಾಗುತ್ತದೆ. ಇದರಿಂದ ನದಿ ಮಲಿನವಾಗುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಮತ್ತು ಪರಿಸರ ಮತ್ತು ನದಿ ಮೂಲ ಜಲಮೂಲಗಳ ಸಂರಕ್ಷಣೆಯಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ, ಡಿ.ಪಿ. ರಾಜೇಶ್ ಪದ್ಮನಾಭ, ಎಸ್.ಎಚ್.ಮತೀನ್ ಮತ್ತು ಮೋಹಮ್ಮದ್ ರಾಫಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net