

ಕಲಬುರಗಿ: ನಗರೀಕರಣ ಮತ್ತು ಕೈಗಾರೀಕರಣವೇ ಪರಿಸರ ನಾಶಕ್ಕೆ ಪ್ರಮುಖ ಕಾರಣ ಎಂದು ಸಹಾಯನ ಎನ್‌ಜಿಒ ಕಾರ್ಯಕ್ರಮ ಮುಖ್ಯಸ್ಥ ಇಳಂಗೋ ಸ್ಟಾನಿಸ್ಲಾಸ್ ಅಭಿಪ್ರಾಯಪಟ್ಟರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಪರಿಸರಕ್ಕಾಗಿ ಯುವ ಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆ ಮತ್ತು ಚಿಕ್ಕ ಮಕ್ಕಳ ಮೇಲೆ ಕಲುಷಿತ ನೀರು ಪರಿಣಾಮ ಬೀರಲಿದೆ. ಇತ್ತೀಚೆಗೆ ಕಲುಷಿತ ನೀರಿನಿಂದಾಗಿ ಅನಾರೋಗ್ಯಕ್ಕೆ ಈಡಾಗುತ್ತಿರುವವರ ಸಂಖ್ಯೆ ಗಣನೀಯ ಹೆಚ್ಚುತ್ತಿದೆ. ನಾಗರಿಕತೆ ಆರಂಭವಾಗಿದ್ದು ನದಿ, ಖನಿಜ ಭೂಮಿಯಲ್ಲಿ. ಆದರೆ ಆಗ ಶುದ್ಧವಾಗಿದ್ದ ನದಿಗಳು ಈಗ ಕಲುಷಿತಗೊಂಡಿದೆ. ನಾಗರಿಕತೆ ಆರಂಭವಾದಾಗ ನದಿಯ ನೀರನ್ನು ಜನ ನೇರವಾಗಿ ಕುಡಿಯಲು ಬಳಸುತ್ತಿದ್ದರು. ಆದರೀಗ ಬಳಸಲು ಸಾಧ್ಯವಾಗುತ್ತಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಪರಿಸರ ಉಳಿಸುವುದು ಎಲ್ಲರ ಆದ್ಯ ಕರ್ತವ್ಯ. ಪರಿಸರ ಚೆನ್ನಾಗಿದ್ದರೆ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ. ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಬೇಕು ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕರಾದ ಡಾ.ಸೀಮಾ ಪಾಟೀಲ್, ದಿಶಾ ಮೆಹತಾ, ಕಲ್ಪನಾ ಇತರರಿದ್ದರು. ಸಂವಾದ ಯುವ ಸಂಪನ್ಮೂಲ ಕೇಂದ್ರ ಕಲಬುರಗಿ ಅಧಿಕಾರಿ ನಾಗೇಶ ಸ್ವಾಗತಿಸಿ ನಿರೂಪಣೆ ಮಾಡಿದರು. ದಿಲ್‌ಶಾದ್ ಪ್ರಾಸ್ತಾವಿಕ ಮಾತನಾಡಿದರು.