ನಗರಾಭಿವೃದ್ಧಿಗೆ ಒಳಚರಂಡಿ ವ್ಯವಸ್ಥೆ ಅವಶ್ಯ

31BL-PC
Published on

ಭಟ್ಕಳ: ಒಂದು ನಗರ ಪೂರ್ಣವಾಗಲೂ ಒಳಚರಂಡಿ ವ್ಯವಸ್ಥೆ ಸೇರಿ ಮೂಲ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ಹೊಂದಿರುವುದು ಅವಶ್ಯವಾಗಿದೆ. ಹಾಗಾಗಿ ಒಳಚರಂಡಿ ನಿರ್ವಣದ ವಿಷಯದಲ್ಲಿ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಹೇಳಿದರು.

ಗುರುವಾರ ಭಟ್ಕಳ ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯಿತಿಗಳಿಗೆ ಅವರು ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.

ಉಪಾಧ್ಯಕ್ಷ ಕೈಸರ್ ಮೊಹತೆಶ್ಯಾಮ್ ಮಾತನಾಡಿ, ನೀವು ಒಳಚರಂಡಿ ಘಟಕವನ್ನು ಮೊದಲು ಗುರುತಿಸಿ. ಪೈಪ್ ಲೈನ್ ಕಾರ್ಯ ಆರಂಭವಾಗಿದೆ. ಆದರೆ, ಇನ್ನೂ ಒಳಚರಂಡಿ ಘಟಕದ ಗುರುತು ಹಾಕಿಲ್ಲ. ಮೊದಲು ಅದನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಉತ್ತರಿಸಿ, ಪೈಪ್​ಲೈನ್ ಕಾರ್ಯ ಆರಂಭವಾಗಿದೆ. ಮೊದಲು ಅದು ಮುಗಿಯಲಿ. ಇವೆಲ್ಲಾ ಕಾರ್ಯಗಳು ಒಂದೇ ಬಾರಿ ಮುಗಿಯುವುದಿಲ್ಲ, ಒಂದೊಂದೆ ಆರಂಭವಾಗಿದೆ ಅದು ಮುಗಿಯಲಿ ಬಿಡಿ ಎಂದರು. ನಂತರ ರಸ್ತೆ ವಿಸ್ತರಣೆ ನಡೆಸುವ ಸಂದರ್ಭ ರೋಡ್ ಪಾಸ್ ನೀಡಬೇಕು. ಮೀನು ಮಾರುಕಟ್ಟೆ ಸ್ಥಳಾಂತರ, ಸರ್ವೆ ನಂಬರ್ ಲೋಪದೋಷ ಸೇರಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು. ಪುರಸಭೆ ಅಧ್ಯಕ್ಷ ಫರ್ವೆಜ್ ಕಾಸಿಂಜಿ, ಎಸಿ ಭರತ್ ಎಸ್., ತಹಸೀಲ್ದಾರ್ ರವಿಚಂದ್ರ, ಮುಖ್ಯಾಧಿಕಾರಿ ಟಿ. ದೇವರಾಜು, ಪುರಸಭೆ ಸದಸ್ಯರು ಇದ್ದರು.

ಜಾಲಿ ಪಟ್ಟಣ ಪಂಚಾಯಿತಿಯಲ್ಲೂ ಪರಿಶೀಲನೆ: ನಗರದ ಅಭಿವೃದ್ಧಿಗಾಗಿ ಸರ್ಕಾರ ಮಾಡುತ್ತಿರುವ ಒಳಚರಂಡಿ ಕಾಮಗಾರಿಯನ್ನು ಕೋಮುಭಾವನೆ ಪಟ್ಟ ಕಟ್ಟಿ ಯೋಜನೆ ಸ್ಥಗಿತಗೊಳಿಸುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ಅಧಿಕಾರಿಗಳ ಏಕ ನಿರ್ಣಯ ಸಾಧ್ಯವಿಲ್ಲ. ಪ್ರತಿಯೊಂದು ಯೋಜನೆಗೂ ಜನಪ್ರತಿನಿಧಿಗಳ ಅಭಿಮತ ಮುಖ್ಯವಾಗಿರುತ್ತದೆ. ಯೋಜನೆ ಜಾರಿಗೊಳಿಸುವಾಗ ಅಡೆತಡೆಗಳು ಸಹಜ. ಜನಪ್ರತಿನಿಧಿಗಳು ಅದನ್ನು ನಿಭಾಯಿಸಿ ನಗರದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಉದ್ಯಮಿಗಳು ನಗರ ಭಾಗದತ್ತ ಬರಬೇಕಾದರೆ ಮೂಲ ಸೌಕರ್ಯದ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಹೇಳಿದರು.

ಪಟ್ಟಣ ಪಂಚಾಯಿತಿ ಕಚೇರಿಯ ಹೊಸಕಟ್ಟಡ ನಗರದ ಮಧ್ಯಭಾಗದಲ್ಲಿ ನಿರ್ವಣವಾದರೆ ಜನರಿಗೆ ಅನುಕೂಲ ಎಂಬ ಸದಸ್ಯರ ಮಾತಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಆಡಳಿತ ಕೆಲಸಕ್ಕಾಗಿ ಜನರು ಕಚೇರಿ ಅಲೆದಾಡಬಾರದು. ಎಲ್ಲವೂ ಈಗ ಡಿಜಿಟಲೈಸ್ ಆಗಿದೆ. ಎಲ್ಲ ದಾಖಲೆಗಳು ಆನ್​ಲೈನ್​ನಲ್ಲಿ ಸಿಗುತ್ತದೆ. ಸದಸ್ಯರು ಜನರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಜಾಲಿ ಪ.ಪಂ. ಅಧ್ಯಕ್ಷೆ ಸಮೀಮ ಬಾನು ಉಪಾಧ್ಯಕ್ಷೆ ಫರ್ಹಾನ ಬಾನು, ಮುಖ್ಯಾಧಿಕಾರಿ ಅಜಯ ಬಾಂದೇಕರ್, ಹುಲಿಮನೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net