ನಗರಸಭೆ, ಪುರಸಭೆಗಳಿಗೆ ಬಿ ಖಾತಾ ನೀಡಲು ಅವಕಾಶ ಕೊಡಿ

Published on

ಕೊಳ್ಳೇಗಾಲ: ನಗರಸಭೆ ಮತ್ತು ಪುರಸಭೆಗಳಿಗೆ ಬಿ ಖಾತಾ ಮಾಡಿಕೊಡಲು ಅವಕಾಶ ನೀಡಬೇಕೆಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮನವಿ ಮಾಡಿದರು.

ಬಿ ಖಾತಾ ನೀಡುವ ಅವಕಾಶ ನೀಡಿದರೆ ನಗರಸಭೆ ಮತ್ತು ಪುರಸಭೆಗೆ ವರಮಾನ ಹೆಚ್ಚಲಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇದರಿಂದ ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಬಹುದು. ಮುಂದಿನ ಅಧಿವೇಶನದಲ್ಲಾದರೂ ಬಿ ಖಾತಾ ಬಿಲ್ ಮಂಡಿಸಿ ಪಾಸ್ ಮಾಡಬೇಕೆಂದು ಒತ್ತಾಯಿಸಿದರು.

ಆರೇಳು ವರ್ಷದಿಂದ ಕೊಳ್ಳೇಗಾಲ ಪಟ್ಟಣದ ಶ್ರೀ ಮಹದೇಶ್ವರ ಕಾಲೇಜಿನ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಜಿಮ್ ಸಾಮಗ್ರಿಗಳು ಬಳಕೆಯಾಗದೆ ನಿರುಪಯುಕ್ತವಾಗಿವೆ. ಸರ್ಕಾರದ ಅನುದಾನ ಸಫಲವಾಗುತ್ತಿಲ್ಲ. ಕಳೆದ 2 ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಹಿಂದಿನ ಕ್ರೀಡಾ ಸಚಿವ ನಾಗೇಂದ್ರ ಅವರು ಈ ಕಾಮಗಾರಿಗಳ ಪೂರ್ಣಕ್ಕೆ ಅವಕಾಶ ನೀಡುವ ಭರವಸೆ ನೀಡಿದ್ದರು. ಅವರು ರಾಜೀನಾಮೆ ನೀಡಿದ ನಂತರ ಎಚ್.ಕೆ ಪಾಟೀಲ್ ಅವರಿಂದಲೂ ಅನುದಾನ ಭರವಸೆ ಸಿಕ್ಕಿತ್ತು. ಆದರೆ, ಅನುದಾನ ಲಭ್ಯತೆ ಇಲ್ಲದೆ ಕಾಮಗಾರಿ ಪೂರ್ಣಕ್ಕೆ ಅವಕಾಶವಾಗಿಲ್ಲ. 2018-19ರಿಂದಲೂ ಕಾಮಗಾರಿಗಳು ಪರಿಪೂರ್ಣವಾಗಿಲ್ಲ. 2019-20ರಲ್ಲಿ 25 ಲಕ್ಷ ರೂ. ಅನುದಾನದಲ್ಲಿ ಜಿಮ್ ಸಾಮಗ್ರಿಗಳನ್ನು ಖರೀದಿ ಮಾಡಲಾಗಿದೆ. ಆದರೆ, ಸಾರ್ವಜನಿಕರ ಬಳಕೆಗೆ ಬರುತ್ತಿಲ್ಲ. ಏಕೆಂದರೆ ಈಗಾಗಲೇ ನಗರಸಭೆಯ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ಪುರುಷ ಮತ್ತು ಮಹಿಳೆಯರ ಜಿಮ್ ಕಟ್ಟಡಗಳು ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಅಂದಾಜು 3.40 ಕೋಟಿ ರೂ. ಅನುದಾನ ನಿಗದಿಯಾಗಿ ಭಾಗಶಃ ನಿರ್ಮಾಣವಾಗಿದೆ. ಹೊರಾಂಗಣ ಬಾಕಿ ಕಾಮಗಾರಿ ನಡೆಸಲು ಇನ್ನು 2.60 ಕೋಟಿ ರೂ. ಅನುದಾನ ಬೇಕಿದೆ ಎಂದರು.

ಈ ವಿಷಯದ ಬಗ್ಗೆ ಸಚಿವರು ಉತ್ತರಿಸಿ, ಪೌರಾಡಳಿತ ನಿರ್ದೇಶನಾಲಯದಿಂದ ಕಾಮಗಾರಿ ಪೂರ್ಣಗೊಳಿಸಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಹಸ್ತಾಂತರಗೊಳಿಸಿದ್ದಲ್ಲಿ ಸಾಮಗ್ರಿಗಳನ್ನು ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ, ಕನಿಷ್ಠ ಪಕ್ಷ ನಗರಸಭೆ, ಪುರಸಭೆಗೆ ಬಿ ಖಾತಾ ಮಾಡಲು ಅವಕಾಶ ಕೊಟ್ಟರೆ ಬರುವ ವರಮಾನದಿಂದ ಈ ಕಾಮಗಾರಿಗಳನ್ನು ಪೂರ್ಣಗೊಳಿಸಬಹುದಿತ್ತು. ಆದ್ದರಿಂದ ಒಳಾಂಗಣ ಹಾಗೂ ಹೊರಾಂಗಣ ಕಾಮಗಾರಿ ಪೂರ್ಣಕ್ಕೆ ಅನುದಾನ ನೀಡಬೇಕೆಂದು ಮನವಿ ಮಾಡಿದರು.

ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯಿಸಿ, ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಈ ವಿಚಾರವನ್ನು ಈಗಾಗಲೇ 2 ಬಾರಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಕ್ರೀಡಾಂಗಣ ಕಾಮಗಾರಿ ವಿಳಂಬವಾಗಿರುವುದು ಎಲ್ಲರ ಕಣ್ಣಿಗೆ ಕಾಣುತ್ತಿದೆ. ಇದೀಗ 3ನೇ ಬಾರಿಗೆ ಸದನದಲ್ಲಿ ಶಾಸಕರು ಚರ್ಚಿಸಿದರೂ ತಾರ್ಕಿಕ ಅಂತ್ಯ ಸಿಗುತ್ತಿಲ್ಲ. ಜಿಮ್ ಸಾಮಗ್ರಿಗಳನ್ನು ಕ್ರೀಡಾ ಇಲಾಖೆ ನೀಡಿದೆ. ಕಟ್ಟಡವನ್ನು ನಗರಸಭೆ ಕಟ್ಟಿಸಲು ತೀರ್ಮಾನವಾಗಿದೆ. ಎಸ್‌ಎಫ್‌ಸಿ ಅನುದಾನದಲ್ಲಿ ಕಟ್ಟಡ ಕಾಮಗಾರಿ ನಡೆದಿದೆ. ಅಂದಾಜು 3.4 ಕೋಟಿ ರೂ. ಅನುದಾನದಲ್ಲಿ ಸದ್ಯಕ್ಕೆ ಕಾಮಗಾರಿ ನಡೆದಿದೆ. ಬಾಕಿ ಉಳಿದ ಕಟ್ಟಡ ಕಾಮಗಾರಿಗೆ 2.6 ಕೋಟಿ ರೂ. ಅಗತ್ಯವಿದೆ. ನಗರಸಭೆಯಿಂದ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರ ಮಾಡಿದರೆ ಸಾಮಗ್ರಿಗಳನ್ನು ಸ್ಥಳಾಂತರ ಮಾಡಿಸುವುದಾಗಿ ತಿಳಿಸಿದ್ದೇವೆ. ಅಲ್ಲದೆ, ಶಾಸಕರು ಒಪ್ಪಿದರೆ ಕ್ರೀಡಾಂಗಣದ ಪೆವಿಲಿಯನ್‌ನಲ್ಲೇ ಕ್ರೀಡಾ ಸಾಮಗ್ರಿಗಳನ್ನು ಇರಿಸಲಾಗುತ್ತದೆ. ಇನ್ನು 2 ತಿಂಗಳಲ್ಲಿ ಬಿ ಖಾತೆ ನೀಡಲು ಅವಕಾಶವಾಗಲಿದೆ. ಎಸ್‌ಎಫ್‌ಸಿ ಅನುದಾನವೂ ಹೆಚ್ಚುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net