ನಗರದಲ್ಲಿ ಹಾಡಿ ಸ್ಥಾಪನೆಗೆ ಒತ್ತಾಯ

HUN-JUNE-1-1(DEED PROGRAMME)
Published on

ಹುಣಸೂರು: ನಗರದಲ್ಲಿ ಒಂದು ಹಾಡಿ ಸ್ಥಾಪನೆಗೆ ನಗರಸಭೆ ಕ್ರಮವಹಿಸಬೇಕೆಂದು ಆದಿವಾಸಿ ಮುಖಂಡರು ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ನಗರದ ಡೀಡ್ ಸಂಸ್ಥೆಯಲ್ಲಿ ನಗರಸಭೆ ನೂತನ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಅವರಿಗೆ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ನಾಲ್ಕು ದಶಕಗಳ ಹಿಂದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರದೂಡಲ್ಪಟ್ಟ ಆದಿವಾಸಿಗಳು ಇಂದಿಗೂ ಅತಂತ್ರ ಸ್ಥಿತಿಯಲ್ಲೇ ಬದುಕು ನಡೆಸುತ್ತಿದ್ದಾರೆ. ರಕ್ಷಿತಾರಣ್ಯದ ಹೆಸರಿನಲ್ಲಿ ಕಾಡಿನಿಂದ ಆಳುವ ಸರ್ಕಾರಗಳನ್ನು ನಂಬಿ ಹೊರಬಂದಿರುವ ಗಿರಿಜನರ ಬದುಕು ಮುಖ್ಯವಾಹಿನಿಗೂ ಸೇರದೆ, ಮೂಲಸ್ಥಳವನ್ನು ಸೇರಲಾಗದೆ ಬಳಲುತ್ತಿವೆ. ನಾಗರಿಕ ಸಮಾಜ ಆದಿವಾಸಿಗಳ ಬದುಕಿಗೆ ಆಸರೆಯಾಗಬೇಕಿದೆ. ನಗರ ವ್ಯಾಪ್ತಿಯಲ್ಲಿ ಹಾಡಿಗಳ ನಿರ್ಮಾಣದ ಮೂಲಕ ಗಿರಿಜನರನ್ನು ಮುಖ್ಯವಾಹಿನಿಗೆ ತರುವ ಕಾರ್ದೊಂದಿಗೆ ಆದಿವಾಸಿಗಳ ಸಮೃದ್ಧ ಸಂಸ್ಕೃತಿ, ಪರಂಪರೆಯ ಪರಿಚಯ ನಾಗರಿಕ ಸಮಾಜಕ್ಕೂ ಆಗಬೇಕಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಒಂದು ಹಾಡಿ ನಿರ್ಮಾಣಕ್ಕೆ ನೂತನ ನಗರಸಭಾಧ್ಯಕ್ಷರು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಆದಿವಾಸಿಗಳ ಈ ಬೇಡಿಕೆ ನ್ಯಾಯಯುತ ಮತ್ತು ಸಂವಿಧಾನದ ಆಶಯಕ್ಕೆ ತಕ್ಕದ್ದಾಗಿದೆ. ಹಾಡಿಯ ನಿರ್ಮಾಣ ಕುರಿತು ಶಾಸಕ ಜಿ.ಡಿ.ಹರೀಶ್‌ಗೌಡ ಮತ್ತು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ರೊಂದಿಗೆ ಸಮಾಲೋಚಿಸಿ ಕ್ರಮವಹಿಸುತ್ತೇನೆಂದು ಭರವಸೆ ನೀಡಿದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಆರ್.ಸಿದ್ದೇಗೌಡ, ನಗರಸಭಾ ಸದಸ್ಯ ದೇವರಾಜು, ಆದಿವಾಸಿ ಪಾರ್ಲಿಮೆಂಟ್ ಅಧ್ಯಕ್ಷ ಹರ್ಷ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜಯಪ್ಪ, ವಿಠಲ್, ಶಿವಣ್ಣ, ಹೆತ್ತಪ್ಪ, ಪ್ರಕಾಶ್, ಶಾರದಾ, ವಿವಿಧ ಹಾಡಿಗಳ ಮುಖಂಡರು ಪಾಲ್ಗೊಂಡಿದ್ದರು. ಇದೇ ವೇಳೆ ಗಿಡಮೂಲಿಕೆ ಔಷಧ ತಜ್ಞೆ ಮಾಸ್ತಮ್ಮ, ನೆರಳಕುಪ್ಪೆ ಕೆಂಪಮ್ಮ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net